ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಅಡಕೆ ತೋಟದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಅಸುನೀಗಿದ ಘಟನೆ, ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಕನಸಿನಕಟ್ಟೆ ಗ್ರಾಮದಲ್ಲಿ ಜ. 5 ರ ಸಂಜೆ ನಡೆದಿದೆ.
ದರ್ಶನ್ (20) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ಹೊಳೆಹೊನ್ನೂರು ಸರ್ಕಾರಿ ಕಾಲೇಜ್ ನಲ್ಲಿ, ಅಂತಿಮ ವರ್ಷದ ಬಿಕಾಂ ಅಭ್ಯಾಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
ಭಾನುವಾರ ಕಾಲೇಜ್ ಗೆ ರಜೆಯಿದ್ದ ಕಾರಣದಿಂದ, ಸಂಜೆ 4. 30 ರ ಸುಮಾರಿಗೆ ತಮ್ಮ ಅಡಕೆ ತೋಟಕ್ಕೆ ನೀರು ಹಾಯಿಸ ಲೆಂದು ದರ್ಶನ್ ತೆರಳಿದ್ದು, ನಂತರ ಮನೆಗೆ ಆಗಮಿಸಿರಲಿಲ್ಲ.ಈ ನಡುವೆ ಸಂಜೆ 6.50 ರ ಸುಮಾರಿಗೆ ತೋಟಕ್ಕೆ ಅವರ ಸಂಬಂಧಿ ಯೋರ್ವರು ತೆರಳಿದ್ದ ವೇಳೆ, ಪಂಪ್ ಸೆಟ್ ಸ್ವಿಚ್ ಬೋರ್ಡ್ ಬಳಿ ದರ್ಶನ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ತಕ್ಷಣವೇ ದರ್ಶನ್ ನನ್ನು ವಾಹನವೊಂದರಲ್ಲಿ ಹೊಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರೀಕ್ಷಿಸಿದ ವೈದ್ಯರು ದರ್ಶನ್ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.
ತೋಟದಲ್ಲಿ ಪಂಪ್ ಸೆಟ್ ಆನ್ ಮಾಡುವ ವೇಳೆ, ವಿದ್ಯುತ್ ಶಾಕ್ ನಿಂದ ದರ್ಶನ್ ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.