ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜನೆ

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ : ವೃತ್ತಿಯ ಜೊತೆಗೆ ಸಮಾಜ ಸೇವೆಯು ಅತಿ ಮುಖ್ಯ. ನಮ್ಮ ನಮ್ಮ ವೃತ್ತಿಯ ಜೊತೆಗೆ ಸಮಾಜಮುಖಿ ಯಾಗಿ ಅಗತ್ಯವಾದ ಸೇವೆಗಳನ್ನು ಸಲ್ಲಿಸುವುದರ ಮುಖಾಂತರ ಜನಮಾನಸವನ್ನು ತಲುಪೋಣ ಎಂದು ನೆಹರು ರಸ್ತೆ ವರ್ತಕರ ಸಂಘದ ಅಧ್ಯಕ್ಷರಾದ ಬಿ.ಎ.ರಂಗನಾಥ್ ಅವರು ಅಭಿಮತ ವ್ಯಕ್ತಪಡಿಸಿದರು.

ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗ ವಾಗಿ ನೆಹರು ರಸ್ತೆಯ ಗಾರ್ಡನ್ ಏರಿಯಾ ಎರಡನೇ ತಿರುವಿನಲ್ಲಿ ನೆಹರು ರಸ್ತೆ ವರ್ತಕರ ಸಂಘ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶಿವಮೊಗ್ಗ, ರೆಡ್ ಕ್ರಾಸ್ ಸಂಜೀವಿನಿ ರಕ್ತ ನಿಧಿ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯ ಮಟ್ಟ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಅರಿತುಕೊಳ್ಳುವುದರ ಜೊತೆಗೆ ನಾವು ಸದಾ ಉತ್ಸಾಹ ಭರಿತ ರಾಗಿ ಹಾಗೂ ಲವಲವಿಕೆ ಯಿಂದ ಇರಲು ಸಾಧ್ಯವಾಗುತ್ತದೆ. 

ರಕ್ತದಾನ ದಿಂದ ದೇಹ ಮನಸ್ಸು ಸದೃಢ ವಾಗುವುದರ ಜೊತೆಗೆ ಇನ್ನೊಬ್ಬರ ಪ್ರಾಣ ಉಳಿಸಿದ ತೃಪ್ತಿ ಲಭಿಸುತ್ತದೆ. ಜಗತ್ತಿನಲ್ಲಿ ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದ ದಾನ ರಕ್ತದಾನ. ಆದ್ದರಿಂದ ಎಲ್ಲಾ ಯುವಕರು ಮೂರು ತಿಂಗಳಿಗೆ ಒಮ್ಮೆಯಾದರೂ ರಕ್ತದಾನ ಮಾಡುವುದರ ಮುಖಾಂತರ ರಕ್ತದ ಕೊರತೆಯನ್ನು ನೀಗಿಸೋಣ ಎಂದು ಕರೆ ನೀಡಿದರು.

ನೆಹರು ರಸ್ತೆ ವರ್ತಕರ ಸಂಘದ ಕಾರ್ಯದರ್ಶಿ ಸುರೇಶ್.ಎಂ.ಆರ್ ಮಾತನಾಡಿ, ಮುಂದಿನ ದಿನಗಳಲ್ಲಿ ತುರ್ತು ಚಿಕಿತ್ಸೆಗೆ ಅಗತ್ಯವಾಗಿ ಬೇಕಾಗಿರುವ ಜೀವಾಮೃತ ರಕ್ತವನ್ನು ದಾನಿಗಳ ಮುಖಾಂತರವೇ ಪಡೆಯ ಬೇಕಾಗಿದ್ದು, ಇದರ ಮಹತ್ವ ವನ್ನು ಅರಿತು ರಕ್ತದಾನಕ್ಕೆ ಹೆಚ್ಚು ಒತ್ತು ನೀಡಬೇಕೆಂದು ನುಡಿದರು.

ನಿರ್ದೇಶಕರಾದ ಆರ್.ಗಿರೀಶ್ ಮಾತನಾಡಿ, ರಕ್ತದಾನ ಮಾಡುವ ಮೂಲಕ ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳ ಬಹುದು. ಇತ್ತೀಚಿನ ವರದಿಯ ಪ್ರಕಾರ ರಕ್ತದಾನಿ ಗಳಿಗೆ ಹೃದಯದ ಸಮಸ್ಯೆ ಕಡಿಮೆ ಎಂದು ನುಡಿದರು. 

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ರಕ್ತದ ಕೊರತೆ ತುಂಬಾ ಇದೆ. ಇತ್ತೀಚಿಗೆ ಕ್ಯಾನ್ಸರ್ ಹಾಗೂ ಅನೇಕ ಬಗೆಯ ಕಾಯಿಲೆಗಳಿಗೆ ಆ ಸಮಯದಲ್ಲಿ ರಕ್ತ ಸಿಗದೇ ಪ್ರಾಣವನ್ನು ಕಳೆದುಕೊಳ್ಳುತ್ತಿ ದ್ದಾರೆ. ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾದ ಇಂತಹ ಕಾರ್ಯಕ್ರಮಗಳು ನಿಜಕ್ಕೂ ಮನುಕುಲದ ಸೇವೆಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ವರ್ತಕರು, ಉದ್ಯಮಿಗಳು ರಕ್ತದಾನ ಮಾಡುವುದರ ಮುಖಾಂತರ ಜನತೆಗೆ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ರಕ್ತದಾನಿ ದಿನಕರ್, ಮಧುಸೂದನ್ ಹಾಗೂ ವರ್ತಕರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು