ನಾವೆಲ್ಲಾ ಒಂದೇ ತಾಯಿಯ ಮಕ್ಕಳಂತೆ ಡಾ.ಬಿ.ಆರ್.ಅಂಬೇಡ್ಕರ್‌ ರವರ ಹಾದಿಯಲ್ಲಿ ಒಟ್ಟಾಗಿ ನಡೆಯೋಣ: ಮಧು ಬಂಗಾರಪ್ಪ

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ಜಾತ್ಯಾತೀತವಾಗಿ, ಪಕ್ಷಾತೀತವಾಗಿ, ನಾವೆಲ್ಲಾ ಒಂದೇ ತಾಯಿಯ ಮಕ್ಕಳಂತೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರು ತೋರಿಸಿರುವ ಹಾದಿಯಲ್ಲಿ ಒಟ್ಟಾಗಿ ನಡೆಯೋಣ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಕರೆ ನೀಡಿದರು.

 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾ ನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸೋಮವಾರ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರವರ 134 ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಘಟನೆಯಿoದ ಮಾತ್ರ ಶಕ್ತಿ ಎಂದು ಅಂಬೇಡ್ಕರ್‌ರವರು ತೋರಿಸಿದ್ದಾರೆ. ಸಂಘಟನೆ ರೂಪ ಬೇರೆ ಬೇರೆಯಾಗಿ ದ್ದರೂ ಉದ್ದೇಶ ಒಂದೇ ಇರುತ್ತದೆ. ಅಂದು ಬ್ರಿಟಿಷರಿಗೆ ಹೆಚ್ಚಿನ ಶಕ್ತಿ ಇರಲಿಲ್ಲ. ಬದಲಾಗಿ ಅವರು ನಮ್ಮನ್ನು ಒಡೆದು ಆಳುವ ನೀತಿಯನ್ನು ಅನುಸರಿ ಸಿದ್ದರಿಂದ ಹಾಗೆ ಕಂಡರು. ಎಲ್ಲರನ್ನು ಒಗ್ಗೂಡಿಸುವ ಕೆಲಸವನ್ನು ಅಂಬೇಡ್ಕರ್‌ ರoತಹ ಮಹನೀಯರು ಮಾಡಿದರು. ವೈವಿಧ್ಯತೆಯಿಂದ ಕೂಡಿರುವ ನಮ್ಮ ದೇಶಕ್ಕೆ ಅದ್ಭುತ ವಾದ ಸಂವಿಧಾನ ನೀಡುವಲ್ಲಿ ಬಹು ದೊಡ್ಡ ಕೊಡುಗೆ ಇತ್ತ ಇವರು ನಮ್ಮ ಸಂವಿಧಾನ ಶಿಲ್ಪಿ ಎನಿಸಿ ಕೊಂಡಿದ್ದಾರೆ. 

ಅಂಬೇಡ್ಕರ್‌ರವರು ತಮ್ಮ ಜೀವನ ದುದ್ದಕ್ಕೂ ಸಾಮಾಜಿಕ ಸಮಾನತೆಗಾಗಿ ಹೋರಾಡಿದರು. ಜಾತಿ ವ್ಯವಸ್ಥೆ, ಅಸೃಶ್ಯತೆ ವಿರುದ್ದ ಹೋರಾಡಿ, ಅನೇಕ ಸುಧಾರಣೆಗಳನ್ನು ತಂದರು.ನಮ್ಮ ಸಂವಿಧಾನದ ಪೀಠಿಕೆ ಬಗ್ಗೆ ವಿದ್ಯಾರ್ಥಿ ಗಳು ತಿಳಿಯಬೇಕೆಂಬ ಉದ್ದೇಶದಿಂದ ಎಲ್ಲ ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಕಡ್ಡಾಯವಾಗಿ ಓದುವ ಆದೇಶವನ್ನು ರಾಜ್ಯ ಸರ್ಕಾರ ಮಾಡಿದ್ದು, 1.8 ಕೋಟಿ ವಿದ್ಯಾರ್ಥಿ ಗಳು ಓದುತ್ತಿದ್ದಾರೆ ಎಂದರು.

 ಮುಖ್ಯವಾಗಿ ಮಾನವೀಯತೆ ಮೆರೆಯ
ಬೇಕು. ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಎಂದು ಬಾಬಾಸಾಹೇಬ್ ಹೇಳುತ್ತಿದ್ದು, ನಮ್ಮ ತಂದೆ ತಾಯಿಯಂತೆ ಅಂಬೇಡ್ಕರ್‌ರವರು ನಮ್ಮ ಜೀವನದ ಬಹಳ ಮುಖ್ಯ ವ್ಯಕ್ತಿಯಾಗಿದ್ದಾರೆ. 

ಪಿಯುಸಿಯಲ್ಲಿ ನಪಾಸಾದ ವಿದ್ಯಾರ್ಥಿ ಗಳಿಗೆ 2 ಮತ್ತು 3 ನೇ ಪರೀಕ್ಷೆ ಬರೆಯುವ ಅವಕಾಶವಿದ್ದು ವಿದ್ಯಾರ್ಥಿ ಗಳು ಇದರ ಸದ್ಬಳಕೆ ಮಾಡಿಕೊಳ್ಳ ಬೇಕು. ಉಚಿತ ಗ್ಯಾರಂಟಿ ಯೋಜನೆ ಗಳು ಬಡವರು, ಹಿಂದುಳಿದವರಿಗೆ ಅತ್ಯಂತ ಸಹಕಾರಿಯಾಗಿವೆ ಎಂದರು. 

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಭೂ ಮಂಡಲ ಇರುವವರೆಗೆ ಸಂವಿಧಾನವನ್ನು ಯಾರೂ ಬದಲಾಯಿಸದಂತಹ ಸಂವಿಧಾನ ನೀಡಿದ ಧೀಮಂತ, ದಾರ್ಶನಿಕ ಡಾ.ಬಾಬಾ ಸಾಹೇಬ್ ಅಂಬೇಡ್ಕರ್. ಶೋಷಿತ ವರ್ಗದ ಧ್ವನಿಯಾಗಿ, ಅವರ ಉಸಿರಾಗಿ ಜೀವನವನ್ನು ಕಟ್ಟಿಕೊಟ್ಟಿದ್ದಾರೆ. ಓರ್ವ ಆರ್ಥಿಕ ತಜ್ಞರೂ ಆಗಿದ್ದ ಅಂಬೇಡ್ಕರ್ ರಿಸರ್ವ್ ಬ್ಯಾಂಕ್ ಇಂಡಿಯಾ ಸ್ಥಾಪನೆಗೆ ಒತ್ತು ನೀಡಿದ್ದರು.

ಉದಾರವಾದಿ ಕೈಗಾರಿಕಾ ನೀತಿ, ನದಿ ಜೋಡಣೆ, ರಾಷ್ಟ್ರೀಯ ಜಲ ನೀತಿ ನೀಡುವ ಪ್ರಯತ್ನ ಮಾಡಿದ್ದರು. ಹಿಂದುಳಿದವರು, ಪರಿಶಿಷ್ಟ ಜಾತಿ, ಪಂಗಡದವರು, ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದರು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ ಇವರು 9 ಭಾಷೆ ಬಲ್ಲವರಾಗಿದ್ದು, ಉತ್ತಮ ವರ್ಣಚಿತ್ರಕಾರ ರಾಗಿದ್ದು ಇವರ ಸ್ವಂತ ಗ್ರಂಥಾಲಯದಲ್ಲಿ 50 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳಿದ್ದವು.

 ರಾಜ್ಯ ಸರ್ಕಾರ ಶಾಲಾ-ಕಾಲೇಜು ಮಕ್ಕಳಿಗೆ ಸಂವಿಧಾನ ಪೀಠಿಕೆ ಓದಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ. ಡಾ.ಅಂಬೇಡ್ಕರ್ ಜನ್ಮ ಸ್ಥಳದಲ್ಲಿ ಸುಮಾರು ರೂ.300 ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಧೀಕ್ಷಾಭೂಮಿ ಅಭಿವೃದ್ಧಿ ಪಡಿಸಲಾಗಿದೆ. ಪ.ಜಾ ಪ. ಪಂ ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ, ಉಚಿತ ಉಜ್ವಲ ಯೋಜನೆ ಹೀಗೆ ಹಲವಾರು ಯೋಜನೆಗಳನ್ನು ಹಿಂದುಳಿದವರ ಏಳಿಗೆಗಾಗಿ ನೀಡಲಾಗುತ್ತಿದೆ ಎಂದ ಅವರು, ಪಕ್ಷಾತೀತ, ಜಾತ್ಯಾತೀತವಾಗಿ ಅಂಬೇಡ್ಕರ್ ಅವರ ಆಶಯದಂತೆ ಬದುಕೋಣ ಎಂದರು.

ಶಾಸಕ ಎಸ್.ಎನ್ ಚನ್ನಬಸಪ್ಪ ಮಾತನಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಂದು ಶಕ್ತಿ. ಅವರ ಚಿಂತನೆಗಳನ್ನು ಅಳವಡಿಸಿ ಕೊಂಡು ನಾವೆಲ್ಲ ಒಂದೇ ಎಂಬ ಭಾವನೆಯಿಂದ ರಾಜಕೀಯ, ಸಾಮಾಜಿಕವಾಗಿ ಜೊತೆಯಾಗಿ ಸಾಗಬೇಕು. ಇದು ಅಂಬೇಡ್ಕರ್ ಅವರ ಆಶಯವಾಗಿದ್ದು ಅದರಂತೆ ನಾವು ನಡೆದುಕೊಳ್ಳಬೇಕೆಂದರು.

ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್‌ರವರನ್ನು ಇಡೀ ಪ್ರಪಂಚ ಗೌರವಯುತವಾಗಿ, ಪ್ರೀತಿಯಿಂದ ಕಾಣುತ್ತಿದೆ. ಅವರು ಬೆಳೆದು ಬಂದ ರೀತಿ ಮಾದರಿಯಾಗಿದ್ದು ನಮ್ಮೆಲ್ಲರ ಧ್ವನಿ ಅವರು. ಮಹಿಳಾ ಸಮಾಜನತೆ ಬಗ್ಗೆ ಚಿಂತಿಸಿದ ಮೊದಲಿಗರು. ಅವರ ಆದರ್ಶ ಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳೋಣ ಎಂದರು.

ಸಹ್ಯಾದ್ರಿ ಕಲಾ ಕಾಲೇಜಿನ ಭಾಷಾಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಮೇಟಿ ಮಲ್ಲಿಕಾರ್ಜುನ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ ರವರು ಜಗತ್ತು ಕಂಡ ಮುಖ್ಯ ಚಿಂತಕ. ಲೋಕ ಜ್ಞಾನಿ. 130 ವರ್ಷಗಳ ಕಾಲ ಬೇರೆ ಬೇರೆ ಸ್ವರೂಪದಲ್ಲಿ ಇವರನ್ನು ಅನುಸರಿಸಲಾಗುತ್ತಿದೆ. ಅವರು ಪ್ರತಿಪಾದಿಸಿದ ವಿಚಾರಗಳನ್ನು ರಾಜ್ಯ ಸರ್ಕಾರ 22 ಸಂಪುಟ ಗಳಲ್ಲಿ ಪ್ರಕಟಿಸಿದೆ. ಈ ಸಂಪುಟಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು ಅದನ್ನೆಲ್ಲ ನಾವು ಓದಬೇಕಿದೆ. 537 ವಿಶೇಷ ಭಾಷಣ ಮಾಡಿದ್ದಾರೆ. ಪ್ರಭುತ್ವ ಮತ್ತು ಜನತೆ ಕುರಿತು ಮಹತ್ವದ ಚಿಂತನೆ ನೀಡಿದ್ದಾರೆ. 

ಒಟ್ಟಾರೆ ಬದುಕಿನ ಚರ್ಚೆ, ಅವರ ವಿಚಾರ ಗಳು, ಚಿಂತನೆಗಳು ನಮಗೆ ಒತ್ತಾಸೆಯಾಗಿ, ಬೆನ್ನೆಲುಬಾಗಿ ನಿಂತಿವೆ. ಹಸನಾದ, ವ್ಯವಸ್ಥಿತ ವಾದ, ಆದರ್ಶ ಬದುಕಿಗೆ ಅವರು ಮಾದರಿ ಯಾಗಿದ್ದಾರೆ. ಅಸ್ಪೃಶ್ಯರಾಗಿ ಅನೇಕ ಕಷ್ಟಗಳನ್ನು ಸಹಿಸಿದ್ದರೂ ಭಾರತವೆಂಬ ಭವ್ಯ, ಪ್ರಜಾಸತ್ತಾತ್ಮಕ ದೇಶ ಕಟ್ಟಲು ಸಹಕಾರಿ ಯಾಗಿದ್ದಾರೆ. ನೆಮ್ಮದಿಯ ಬದುಕು ಬದುಕಲು ತತ್ವಗಳನ್ನು ರೂಪಿಸಿದ್ದಾರೆ.ಮಹಿಳಾ ಸಬಲೀಕರಣ, ಮಹಿಳೆಯರ ಸ್ವಾಯತ್ತತೆಗಾಗಿ ಅನೇಕ ಯೋಜನೆಗಳನ್ನು ಅಂದೇ ರೂಪಿಸಿದ್ದರು. ಶೈಕ್ಷಣಿಕ, ಆರ್ಥಿಕ, ರಾಜಕೀಯ, ಸಾಮಾಜಿಕ ಚಿಂತನೆ ಗಳನ್ನು ಕಟ್ಟಿಕೊಡಲು ಅವರು ಬುದ್ದ ಮಾರ್ಗ ಅನುಸರಿಸಿದ್ದಾರೆ.ಅಧ್ಯಯನ ಶೀಲರಾದ ಇವರು ಖಚಿತ ನಿಲುವು ತಾಳುವ ಮುನ್ನ ಅಧ್ಯಯನ ನಡೆಸುತ್ತಿದ್ದರು. ಜಾತ್ಯಾತೀತತೆ ಬಗ್ಗೆ ಸ್ಪಷ್ಟ ತಿಳುವಳಿಕೆ, ನಿಲುವು ಹೊಂದಿದ್ದ ಇವರು ನಮಗೆ ದಾರಿದೀಪ. 
ಇವರ ಚಿಂತನೆಗಳು ನಮಗೆ ಊರುಗೋಲಾಗಿವೆ. 

ಪೀಠಿಕೆಯಲ್ಲಿ ನಮ್ಮ ದೇಶ ಹೇಗೆ ಸಾಗಬೇಕೆಂಬ ಕುರಿತು ಸ್ಪಷ್ಟ ಸೂತ್ರ ಗಳನ್ನು ನೀಡಿದ್ದಾರೆ. ಒಂದು ದೇಶಕ್ಕೆ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ವಾತಂತ್ರ‍್ಯ ಏಕಕಾಲದಲ್ಲಿ ಒದಗಿ ಬಂದರೆ ಅದು ಮಾದರಿ ದೇಶ ಆಗುತ್ತದೆ ಎಂಬ ವಿಚಾರ ಮಂಡಿಸಿ ದ್ದಾರೆ. ಅವರ ಚಿಂತನೆ, ವಿಚಾರಗಳನ್ನು ಪ್ರತಿ ಶಾಲಾ ಕಾಲೇಜುಗಳಲ್ಲಿ ಅತ್ಯಂತ ಜತನದಿಂದ ಅಧ್ಯಯನ ಮಾಡಿದರೆ ನಮ್ಮ ದೇಶ ಇನ್ನೂ ಉತ್ತಮ ಮತ್ತು ಮಾದರಿ ದೇಶವಾಗುತ್ತದೆ ಎಂದ ಅವರು ಅವರ ಚಿಂತನೆಗಳು ಕಣ್ಣೆದುರಿನ ಬೆಳಕು. ಅವರ ಚಿಂತನೆ ಚರಂತನವಾಗಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಸಕ್ಷಮ ಅಂಗನವಾಡಿ ಕೇಂದ್ರಗಳಿಗೆ ಎಲ್ ಇ ಡಿ ಟಿವಿ ವಿತರಣೆ ಮಾಡಲಾಯಿತು. ಭಾಗ್ಯಲಕ್ಷ್ಮಿ ಯೋಜನೆ ಯಡಿ 18 ವರ್ಷ ತುಂಬಿದ ಫಲಾನುಭವಿಗಳಿಗೆ ಪರಿಪಕ್ವ ಮೊತ್ತ ನೀಡಲಾಯಿತು. ಸುಕನ್ಯಾ ಸಮೃದ್ದಿ ಯೋಜನೆಯ ಫಲಾನುಭವಿ ಗಳಿಗೆ ಪಾಸ್ ಬುಕ್ ವಿತರಣೆ ಮಾಡಲಾಯಿತು. ಅಂಗನವಾಡಿ ಕಾರ್ಯಕರ್ತೆಯರಿಗೆ ಕಾರ್ಯಾದೇಶ ಪತ್ರ ನೀಡಲಾಯಿತು. 

ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು.

ಅಂಬೇಡ್ಕರ್ ಭವನದ ಆವರಣದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ ರವರ ಜೀವನ ಕುರಿತಾದ ಛಾಯಾ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.

ವಿಧಾನ ಪರಿಷತ್ ಶಾಸಕರಾದ, ಬಲ್ಕೀಶ್ ಬಾನು, ಡಿ.ಎಸ್.ಅರುಣ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಸೂಡಾ ಅಧ್ಯಕ್ಷ ಹೆಚ್ ಎಸ್ ಸುಂದರೇಶ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ.ಸಿಇಓ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಎಸಿ ಸತ್ಯನಾರಾಯಣ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಿ.ಮಲ್ಲೇಶಪ್ಪ, ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು