ಶುದ್ಧ ಹಾಲು ಪೂರೈಕೆ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಿ

ವಿಜಯ ಸಂಘರ್ಷ ನ್ಯೂಸ್ 
ಕೆ.ಆರ್.ಪೇಟೆ: ಕಲಬೆರಕೆರಹಿತ ಶುದ್ಧ ಹಾಲು ಪೂರೈಕೆ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಿ ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ಹೇಳಿದರು.

ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಕೈಗೊನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ರೈತರು ಹೈನೋದ್ಯಮ ಉಳಿಸಿಕೊಂಡು ಬಂದಿರು ವುದು ಮಾದರಿಯಾಗಿದೆ. ಹೈನುಗಾರಿಕೆ ಇಲ್ಲದ ಗ್ರಾಮ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿಯೇ ಹೈನುಗಾರಿಕೆಯಲ್ಲಿ ಪ್ರಥಮವಾಗಿದೆ. ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಮಾರುಕಟ್ಟೆಯಲ್ಲಿ ಗುಣ ಮಟ್ಟದ ನಂದಿನಿ ಹಾಲು ಹಾಗೂ ಅದರ ಉತ್ಪನ್ನ ಕಡಿಮೆ ಬೆಲೆಗೆ ಸಿಗುತ್ತಿದ್ದು ಎಲ್ಲರೂ ಬಳಸಲು ಮುಂದಾಗಿ ಎಂದರು.

ಮನ್ಮುಲ್ ಮಾಜಿ ಅಧ್ಯಕ್ಷ ಮತ್ತು ಹಾಲಿ ನಿರ್ದೇಶಕ ಎಂ.ಬಿ ಹರೀಶ್ ಮಾತನಾಡುತ್ತ, ಪಶುಗಳ ಆರೈಕೆ ಮುಖ್ಯವಾಗಿದ್ದು ಕಡ್ಡಾಯ ವಾಗಿ ರಾಸುಗಳಿಗೆ ವಿಮೆ ಮಾಡಿಸಿ. ಪಶು ಸಂಗೋಪನೆಯನ್ನು ವೈಜ್ಞಾನಿಕವಾಗಿ ಮಾಡಿದ್ದಲ್ಲಿ ಅಧಿಕ ಲಾಭಕಾಣಲು ಸಾಧ್ಯ ವಾಗುತ್ತದೆ. ಹಾಲಿನ ಕೊಬ್ಬಿನ ಅಂಶ 3.5ಕ್ಕಿಂತ ಹೆಚ್ಚಾಗಿರಬೇಕು, ಖನಿಜ ಮಿಶ್ರಣ, ಗೋಧಾರ ಶಕ್ತಿಪುಡಿ, ನೆಕ್ಕು ಬಿಲ್ವೆ, ಜೋಳದ ನುಚ್ಚು ಪಶು ಆಹಾರ, ಹಸಿರು ಮೇವಿನ ಜತೆ ಒಣ ಹುಲ್ಲಿನೊಂದಿಗೆ ಸಮತೋಲನ ಆಹಾರ ನೀಡಿ ಎಂದು ತಿಳಿಸಿದರು.

ಮನ್ಮುಲ್ ವಿಸ್ತರಣಾಧಿಕಾರಿ ನಾಗಪ್ಪ ಅಲ್ಲಿಬಾದಿ ಆಯವ್ಯಯ ಮಂಡಿಸಿದರು.ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಮಾರ್ಗವಿಸ್ತರಣಾಧಿಕಾರಿ ನಾಗಪ್ಪ ಅಲ್ಲಿಬಾದಿ ಸಂಘದ ಅಧ್ಯಕ್ಷೆ ಮೀನಾಕ್ಷಿ ನಾಗೇಶ್,ಉಪಾಧ್ಯಕ್ಷೆ ಜಯಮ್ಮ ಗವಿರಂಗೇಗೌಡ, ನಿರ್ದೇಶಕರಾದ ಪಾರ್ವತಿ, ನಾಗಮ್ಮ, ಸುನಂದಮ್ಮ, ಸುಜಾತ, ಚಿಕ್ಕಮ್ಮ, ಶಶಿಕಲಾ, ವಿಜಯ, ಬಿ.ಅಶ್ವಿನಿ, ವರಲಕ್ಷ್ಮಿ,ಗ್ರಾ. ಪಂ ಸದಸ್ಯ ಆನಂದ್, ಸಂಘದ ಕಾರ್ಯದರ್ಶಿ ಹೇಮಾವತಿ, ಹಾಲು ಪರೀಕ್ಷಕಿ ರೂಪ, ಸಹಾಯಕಿ ಧನಲಕ್ಷ್ಮೀ,ಗ್ರಾಮಸ್ಥರು ಇದ್ದರು.

✍️*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು