ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಬದುಕು ಬಲಗೊಳ್ಳಲು ಆಧ್ಯಾತ್ಮದ ಅರಿವು ನಿರಂತರ ಸಾಧನೆ ಯಿರಬೇಕು. ಪ್ರಯತ್ನದಿಂದ ಮಾತ್ರ ಒಳ್ಳೆಯ ಕಾರ್ಯಗಳು ನಡೆಯಲು ಸಾಧ್ಯ.ಎಲ್ಲರ ಬಾಳ ಬದುಕಿನಲ್ಲಿ ನ್ಯಾಯ ನೀತಿ ಧರ್ಮ ಬೆಳೆದುಕೊಂಡು ಬರುವ ಅವಶ್ಯಕತೆ ಇದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ನಗರದ ವೀರಶೈವ ಸಭಾಭವನ ಪಕ್ಕದ ನಿರ್ಮಿಸಿದ ಶ್ರೀ ಜಗದ್ಗುರು ರಂಭಾಪುರೀಶ ನಿವಾಸ ನೂತನ ಕಟ್ಟಡದ ಉದ್ಘಾಟನಾ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಿ ದರು.
ಜೀವನ ಸುಖ ದುಃಖಗಳ ಸಮ್ಮಿಶ್ರಣ. ಸಂಪಾದಿಸಿದ ಆಸ್ತಿಗಳಿಸಿದ ಸಂಪತ್ತು ಶಾಶ್ವತವಲ್ಲ, ಸುಖ ಶಾಂತಿ ಸಮಾಧಾನ ಗಳೇ ನಿಜವಾದ ಸಂಪತ್ತು. ದೇವರು ಎಂಬುದು ಕಣ್ಣಿಗೆ ಕಾಣದ ಒಂದು ಶಕ್ತಿ. ಅದು ಕರೆದರೆ ಬರುವುದಿಲ್ಲ. ಅದು ಇರುವ ಕಡೆ ಹೋಗಲು ಸಾಧ್ಯ ವಾಗದು. ಮಾಡುವ ಕೆಲಸ ಆಡುವ ಮಾತು ಮತ್ತು ಬದುಕುವ ರೀತಿಯಲ್ಲಿ ದೇವರನ್ನು ಕಾಣಬೇಕಾಗಿದೆ ಎಂದರು.
ಆತ್ಮ ವಿಶ್ವಾಸ ನಿಶ್ಚಿತ ಗುರಿ ಮತ್ತು ಸಂಯಮ ಜೀವನ ಯಶಸ್ವಿಗೆ ಅಡಿ ಪಾಯ. ಶ್ರೀ ಜಗದ್ಗುರು ರೇಣುಕಾ ಚಾರ್ಯರು ವೀರಶೈವ ಧರ್ಮ ಸಿದ್ಧಾಂತದಲ್ಲಿ ಕ್ರಿಯಾಶೀಲ ಬದುಕು ಮತ್ತು ಉದಾತ್ತ ಮೌಲ್ಯಗಳನ್ನು ಪರಿಪಾಲಿಸಿ ಕೊಂಡು ನಡೆದರೆ ಜೀವನದಲ್ಲಿ ಯಶಸ್ಸು ಸಾಧ್ಯವೆಂದು ಬೋಧಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಾಲ್ಗೊಂಡ ಮಳಲಿ ಸಂಸ್ಥಾನ ಮಠದ ಡಾ:ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಚಿನ್ನವಿಲ್ಲದೇ ದಿನ ಕಳೆಯಬಹುದು. ಆದರೆ ಅನ್ನ ಇಲ್ಲದೇ ದಿನ ಕಳೆಯಲು ಸಾಧ್ಯವಿಲ್ಲ. ಸತ್ಯ ಶುದ್ಧ ಕಾಯಕ-ಪ್ರಾಮಾಣಿಕ ಪ್ರಯತ್ನ ದಿಂದ ಬದುಕು ಉಜ್ವಲಗೊಳ್ಳುವುದೆಂದರು.
ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್.ಮಹೇಶಕುಮಾರ್, ಕಾರ್ಯ ದರ್ಶಿ ವಾಗೀಶ ಕೋಠಿ, ಸಚ್ಚಿದಾನಂದ, ಆನಂದಕುಮಾರ್, ಕೂಡ್ಲಿಗೆರೆ ಹಾಲೇಶ್, ಜಯಣ್ಣ, ಎಡೆಹಳ್ಳಿ ಮಹೇಶ್ವರಪ್ಪ, ಮಹೇಶ್ವರಪ್ಪಗೌಡ್ರು, ಹುಬ್ಬಳ್ಳಿಯ ಸಿದ್ದು ಪಾಟೀಲ, ಅಜ್ಜಯ್ಯಸ್ವಾಮಿ, ಹೆಚ್.ಆರ್. ಅಶೋಕ ಉಪಸ್ಥಿತರಿದ್ದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿಗಳಾದ ಬೆಳಗಾಲ ಪೇಟೆ ಸಿದ್ದಲಿಂಗ ಶಾಸ್ತ್ರಿಗಳು ಮತ್ತು ತಂಡದವರಿಂದ ಶಾಸ್ರೋಕ್ತವಾಗಿ ಎಲ್ಲಾ ಪೂಜಾ ವಿಧಾನಗಳು ಜರುಗಿದವು.