ಭದ್ರಾವತಿ-ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ : ತಾಲೂಕಿನ ಹಿರಿಯೂರು ಗ್ರಾಮದ ತೋಟದ ಮನೆಯೊಂದರಲ್ಲಿ ಮಂಗಳವಾರ ರಾತ್ರಿ ಚಿರತೆಯೊಂದು ಅರಣ್ಯ ಇಲಾಖೆ ಅಳವಡಿಸಿದ್ದ ಬೋನ್‌ನಲ್ಲಿ ಸೆರೆ ಸಿಕ್ಕಿರುವ ಘಟನೆ ನಡೆದಿದೆ. 

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಸಿಬ್ಬಂದಿಗಳು ಚಿರತೆ ಯನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ರಾತ್ರಿ ವೇಳೆ ಪತ್ರಕರ್ತ ಸುರೇಶ್‌ರವರ ಹಿರಿಯೂರಿನ ತೋಟದ ಮನೆಗೆ ನುಗ್ಗಿ ಸಾಕು ನಾಯಿಯನ್ನು ಕೊಂದು ತಿಂದು ಪರಾರಿ ಯಾಗಿತ್ತು. ಈ ಹಿನ್ನಲೆಯಲ್ಲಿ ಹಿರಿಯೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಎದುರಾಗಿತ್ತು. 

ಸುರೇಶ್‌ರವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಯಿಂದ ಅವರ ತೋಟದಲ್ಲಿ ಬೋನ್ ಅಳವಡಿಸಲಾಗಿತ್ತು. ಕಳೆದ 2 ದಿನಗಳ ಹಿಂದೆ ಗೊಂದಿ ಗ್ರಾಮದಲ್ಲಿ ಜನವಸತಿ ಪ್ರದೇಶ ಗಳಿಗೆ ನುಗ್ಗಿ ಮನೆಯ ಆವರಣದಲ್ಲಿದ್ದ ಸಾಕು ನಾಯಿಯನ್ನು ಚಿರತೆಯೊಂದು ಕೊಂದು ತಿಂದು ಪರಾರಿಯಾಗಿತ್ತು.  

ಈ ಸಂಬಂಧ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್‌ ಮಾಧ್ಯಮಗಳಿಗೆ ಮಾಹಿತಿ ನೀಡಿ, ಸಿರೆ ಸಿಕ್ಕಿರುವ ಚಿರತೆ ಸುಮಾರು 4 ರಿಂದ 5 ವರ್ಷದ ಪ್ರಾಯದಾಗಿದ್ದು, ಸೆರೆ ಸಿಕ್ಕಿರುವ ಚಿರತೆಯನ್ನು ಭದ್ರಾ ಅಭಯಾರಣ್ಯ ಅಥವಾ ಬೇರೆ ಯಾವ ಅರಣ್ಯ ಪ್ರದೇಶದಲ್ಲಿ ಬಿಡಬೇಕೆಂಬ ನಿರ್ಧಾರ ಮೇಲಾಧಿಕಾರಿಗಳು ಕೈಗೊಳ್ಳುತ್ತಾರೆ. ನಂತರ ಅವರ ನಿರ್ದೇಶನದಂತೆ ಚಿರತೆ ಬಿಡಲಾಗು ವುದು. ಈ ಭಾಗದಲ್ಲಿ ಚಿರತೆ ಹೆಚ್ಚಾಗಿರುವ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. 

ಕೆಲವೊಂದು ಸಂದರ್ಭಗಳಲ್ಲಿ ಕಾಡಿನಿಂದ ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ಬರುವುದು ಸಹಜ. ನಿವಾಸಿಗಳು ಭಯಪಡುವ ಅಗತ್ಯ ವಿಲ್ಲ. ಯಾವುದೇ ಕಾಡು ಪ್ರಾಣಿಗಳು ಕಾಣಿಸಿಕೊಂಡಲ್ಲಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು