ಭದ್ರಾವತಿ-ವಿದ್ಯುತ್‌ ಕ್ಷೇತ್ರ ಖಾಸಗೀಕರಣ ವಿರೋಧಿಸಿ ಮೆಸ್ಕಾಂ ನೌಕರರ ಪ್ರತಿಭಟನೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ರಾಜ್ಯದಲ್ಲಿ ವಿದ್ಯುತ್‌ ಕ್ಷೇತ್ರದ ಖಾಸಗೀಕರಣದ ವಿರುದ್ಧ ಕವಿಪ್ರನಿನಿ ಅಧಿಕಾರಿಗಳ ಹಾಗೂ ನೌಕರರ ಒಕ್ಕೂಟ (ಫೆಡರೇಶನ್) ಬುಧವಾರ ಸಾಂಕೇತಿಕ ಪ್ರತಿಭಟನೆ ನಡೆಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

     ನಗರದ ಜೆಪಿಎಸ್ ಕಾಲೋನಿಯ ಕಾರ್ಯನಿರ್ವಾಹಕ ಇಂಜಿನಿಯರ್‌ ರವರ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಆಗ್ರಹಿಸಿದರು. 

     ವಿದ್ಯುತ್ ವಿತರಣಾ ಪರವಾನಿಗೆ ಖಾಸಗಿಯವರಿಗೆ ನೀಡುವುದರಿಂದ ಭವಿಷ್ಯ ದಲ್ಲಿ ಸಾಕಷ್ಟು ತೊಂದರೆ ಎದುರಿಸಬೇಕಾಗು ತ್ತದೆ. 2003 ವಿದ್ಯುತ್ ಕಾಯ್ದೆ ಅನ್ವಯ ಈಗಾಗಲೇ ಟಾಟಾ ಪವರ್ ದೇಶದ ಇತರೆ ರಾಜ್ಯಗಳಲ್ಲಿ ವಿದ್ಯುತ್ ವಿತರಣಾ ಪರವಾನಿಗೆ ಪಡೆದುಕೊಂಡಿದೆ. ಈ ಹಿಂದೆ ರಾಜ್ಯದಲ್ಲೂ ಸಹ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಿತ್ತು. ಇದಕ್ಕೆ ನೌಕರರ ಸಂಘ ತೀವ್ರ ವಿರೋಧ ವ್ಯಕ್ತಪಡಿ ಸಿದ ಹಿನ್ನಲೆಯಲ್ಲಿ ಹಿಂದೆ ಸರಿದಿತ್ತು. ಇದೀಗ ಪುನಃ ಅರ್ಜಿ ಸಲ್ಲಿಸಿದ್ದು, ಜೂ.23ರೊಳಗಾಗಿ ಆಕ್ಷೇಪಣೆ ಸಲ್ಲಿಸಲು ತಿಳಿಸಲಾಗಿದೆ. ಈ ಹಿನ್ನಲೆಯಲ್ಲಿ ನೌಕರರು ಪ್ರತಿಭಟಿಸಿ ವಿರೋಧ ವ್ಯಕ್ತಪಡಿಸಿದರು. 

    ಮೆಸ್ಕಾಂ ಅಧಿಕಾರಿಗಳು ಮಾತನಾಡಿ, ನೌಕರರು ಆತಂಕಪಡುವ ಅಗತ್ಯವಿಲ್ಲ. ನೌಕರರ ಹಿತಾಸಕ್ತಿಗೆ ಪೂರಕವಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದರು. 

     ಮೆಸ್ಕಾಂ ನೌಕರರ ಸಂಘದ ಶಿವಮೊಗ್ಗ ವೃತ್ತದ ಉಪಾಧ್ಯಕ್ಷ ಜಿ. ಹೇಮಣ್ಣ, ನೌಕರರ ಸಂಘದ ಸ್ಥಳೀಯ ಪದಾಧಿಕಾರಿಗಳು, ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಾಶ್ ಬಳ್ಳಾಪುರ, ಲೆಕ್ಕಾಧಿಕಾರಿ ಅಶ್ವಿನ್ ಕುಮಾರ್, ಆಂತರಿಕ ಲೆಕ್ಕ ಪರಿಶೋಧಕ ಮಲ್ಲೇಶ್ ನಾಯ್ಕ್, ನಗರ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಬೀರಪ್ಪ, ಗ್ರಾಮಾಂತರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಬ್ದುಲ್ ಮುನಾಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮೆಸ್ಕಾಂ ಎಲ್ಲಾ ಘಟಕಗಳ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು