ಶಿವಮೊಗ್ಗ-ಗ್ರಾಹಕರಿಗೆ ಪರಿಹಾರ ನೀಡಲು ಟಿವಿಎಸ್ ಕ್ರೆಡಿಟ್ ಸಂಸ್ಥೆಗೆ ಗ್ರಾಹಕ ಆಯೋಗ ಆದೇಶ

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ಮುನ್ಸೂಚನೆ ನೀಡದೆ ಏಕಾಏಕಿ ವಾಹನ ಜಪ್ತಿ ಮಾಡಿ ಮಾರಾಟ ಮಾಡಿದ್ದ ಟಿವಿಎಸ್ ಕ್ರೆಡಿಟ್ ಸರ್ವಿಸಸ್ ಸಂಸ್ಥೆಯ ವಿರುದ್ಧ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ತೀರ್ಪು ನೀಡಿ, ದೂರುದಾರರಿಗೆ ವಾಹನವನ್ನು ಹಿಂತಿರುಗಿಸುವಂತೆ ಹಾಗೂ ರೂ.1.10 ಲಕ್ಷ ಪರಿಹಾರ ಪಾವತಿಸುವಂತೆ ಆದೇಶಿಸಿದೆ.

     ಶಿವಮೊಗ್ಗದ ತುಂಗಾನಗರ ನಿವಾಸಿ ಶಾಬಾಜ್ ಎಸ್. ಅವರು ತಮ್ಮ ಜೀವನೋಪಾಯಕ್ಕಾಗಿ ರೂ.15,10,147 ಸಾಲ ಪಡೆದು ಐಷರ್ ಪ್ರೊ 30009 ಗೂಡ್ಸ್ ವಾಹನವನ್ನು ಖರೀದಿಸಿದ್ದರು. ತಿಂಗಳಿಗೆ ರೂ.44,361 ಇಎಂಐ ನಿಗದಿಯಾಗಿದ್ದು, 5 ಕಂತುಗಳನ್ನು ಪಾವತಿಸಿ 4 ಕಂತುಗಳ ಬಾಕಿ ಉಳಿಸಿಕೊಂಡಿದ್ದರು.

     ದಿನಾಂಕ 31/12/2024 ರಂದು ವಾಹನವು ಕೆಲಸದ ನಿಮಿತ್ತ ಹಾಸನಕ್ಕೆ ತೆರಳಿದ್ದ ವೇಳೆ, ಯಾವುದೇ ಪೂರ್ವ ಮಾಹಿತಿ ಅಥವಾ ತಿಳುವಳಿಕೆ ಪತ್ರ ನೀಡದೆ ಟಿವಿಎಸ್ ಕ್ರೆಡಿಟ್ ಸಂಸ್ಥೆಯು ವಾಹನವನ್ನು ಜಪ್ತಿ ಮಾಡಿ ಕೊಂಡಿತ್ತು. ನಂತರ ಆರ್‌ಬಿಐ ಮಾರ್ಗ ಸೂಚಿಗಳನ್ನು ಪಾಲಿಸದೆ ವಾಹನವನ್ನು ಹರಾಜು ಮೂಲಕ ಮಾರಾಟ ಮಾಡಲಾಗಿದೆ ಎಂದು 02/02/2025 ರಂದು ನೋಟಿಸ್ ನೀಡಿ, ಬಾಕಿ ವ್ಯತ್ಯಾಸ ಮೊತ್ತ ರೂ.4,84,204 ಪಾವತಿಸುವಂತೆ ದೂರು ದಾರರಿಗೆ ತಾಕೀತು ಮಾಡಿತ್ತು. ಇದನ್ನು ಪ್ರಶ್ನಿಸಿ ಶಾಬಾಜ್ ಅವರು ಜಿಲ್ಲಾ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.

     ವಿಚಾರಣೆ ನಡೆಸಿದ ಆಯೋಗವು, ಆರ್‌ಬಿಐ ಮಾರ್ಗಸೂಚಿ ಉಲ್ಲಂಘನೆ ಮತ್ತು ಹೈಕೋರ್ಟ್‌ನ ತೀರ್ಪುಗಳನ್ನು ಪರಿಗಣಿಸಿ ಹಣಕಾಸು ಸಂಸ್ಥೆಯ ನಡೆ ಸೇವಾ ನ್ಯೂನ್ಯತೆ ಮತ್ತು ಅನುಚಿತ ವ್ಯವಹಾರ ಪದ್ಧತಿ ಎಂದು ತೀರ್ಮಾನಿಸಿತು.

ವಾಹನ ವಾಪಸಾತಿ: 

ಆದೇಶ ನೀಡಿದ 45 ದಿನಗಳ ಒಳಗೆ ಐಷರ್ ವಾಹನವನ್ನು ದೂರುದಾರರ ವಶಕ್ಕೆ ನೀಡಬೇಕು. ವಿಫಲವಾದಲ್ಲಿ, ದಿನಾಂಕದಿಂದ ವಾಹನ ಹಸ್ತಾಂತರಿ ಸುವವರೆಗೆ ದಿನವೊಂದಕ್ಕೆ ರೂ.2,000 ದಂಡ ಪಾವತಿಸಬೇಕು.

ಪರಿಹಾರ ಮೊತ್ತ: 

ಮಾನಸಿಕ ಹಿಂಸೆಗೆ ರೂ.1,00,000 ಹಾಗೂ ವ್ಯಾಜ್ಯ ವೆಚ್ಚವಾಗಿ ರೂ.10,000 ಸೇರಿ ಒಟ್ಟು ರೂ.1,10,000 ಹಣವನ್ನು 45 ದಿನಗಳೊಳಗೆ ಪಾವತಿಸಬೇಕು. ತಪ್ಪಿದ್ದಲ್ಲಿ ವಾರ್ಷಿಕ ಶೇ. 10 ರ ಬಡ್ಡಿ ಸಹಿತ ನೀಡಬೇಕು ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಹಾಗೂ ಸದಸ್ಯರಾದ ಬಿ.ಡಿ.ಯೋಗಾ ನಂದ ಅವರನ್ನೊಳಗೊಂಡ ಪೀಠ ಆದೇಶ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು