ಭದ್ರಾವತಿ-ವಾಮಾಚಾರದ ಭಯ ಹುಟ್ಟಿಸಿ ಚಿನ್ನಾಭರಣ ವಂಚನೆ: ಕೆಲವೇ ಗಂಟೆ ಯಲ್ಲಿ ಆರೋಪಿ ಅಂದರ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ವಾಮಾಚಾರ ಮಾಡ ಲಾಗಿದೆ ಎಂದು ಮಹಿಳೆಯನ್ನು ನಂಬಿಸಿ, ಪೂಜೆ ಮಾಡುವ ನೆಪದಲ್ಲಿ ಚಿನ್ನಾಭರಣ ಹಾಗೂ ಹಣ ಪಡೆದು ವಂಚಿಸಿದ ಆರೋಪಿಯನ್ನು ಹೊಸಮನೆ ಪೊಲೀಸರು ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.

ಭದ್ರಾವತಿ ಗಾಂಧಿನಗರದ ನಿವಾಸಿ ಹಾಗೂ ಕೆಎಸ್‌ಆರ್‌ಟಿಸಿ ಕಿರಿಯ ಸಹಾಯಕಿ ಯಾಗಿರುವ 36 ವರ್ಷದ ಮಂಗಳ ನಾಯಕ್ ಅವರು ಸೆ: 7 ರಂದು ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಪ್ರಕಾರ, ಮುರಳಿ ಮತ್ತು ಆತನ ಸಹೋದರ ರವಿ ಎಂಬವರು ಮಂಗಳ ನಾಯಕ್ ಅವರಿಗೆ ಪರಿಚಯವಾಗಿದ್ದರು. ಬಳಿಕ, ನಿಮ್ಮ ಮೇಲೆ ವಾಮಾಚಾರ ಪ್ರಯೋಗ ವಾಗಿದ್ದು, ಅದನ್ನು ತೆಗೆಸದೇ ಹೋದರೆ ನಿಮಗೂ ಹಾಗೂ ನಿಮ್ಮ ಮಕ್ಕಳಿಗೂ ದೊಡ್ಡ ಮಟ್ಟದ ಸಮಸ್ಯೆ ಯಾಗಲಿದೆ ಎಂದು ನಂಬಿಸಿದ್ದಾರೆ ಎನ್ನಲಾಗಿದೆ.

ನಂತರ ಮನೆಗೆ ಬಂದು ಪೂಜೆ ನಡೆಸಿದ ಆರೋಪಿಗಳು, ಪೂಜೆ ಪೂರ್ಣ ಗೊಂಡ ಬಳಿಕ ಬಂಗಾರದ ಒಡವೆ ಗಳನ್ನು ತಮ್ಮ ಬಳಿ ನೀಡುವಂತೆ ತಿಳಿಸಿದ್ದಾರೆ. ಅವುಗಳನ್ನು ತಮ್ಮ ಮನೆಗೆ ಕೊಂಡೊಯ್ದು ವಿಶೇಷ ಪೂಜೆ ಮಾಡಿ ವಾಪಸ್ ನೀಡುವುದಾಗಿ ಹೇಳಿ ಮಹಿಳೆಯನ್ನು ನಂಬಿಸಿ, ಸುಮಾರು 193 ಗ್ರಾಂ ಚಿನ್ನಾಭರಣ ಹಾಗೂ ₹2 ಲಕ್ಷ ಹಣ ಪಡೆದುಕೊಂಡು ವಂಚಿಸಿ ದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಹೊಸಮನೆ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.155/2026, ಬಿಎನ್‌ಎಸ್ ಕಲಂ 316(2), 318(4) ಸಹಿತ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾಗಿದ ಕೆಲವೇ ಗಂಟೆಗಳಲ್ಲಿ ಮುರುಳಿ ಅಲಿಯಾಸ್ ಕರಿಯಾ, 31 ವರ್ಷ, ಎಂಬ ಆರೋಪಿ ಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರವಿ ಅಂಗಡಿಯಲ್ಲಿ ಅಡವಿಟ್ಟಿದ್ದ ಹಾಗೂ ಚಿನ್ನವನ್ನು ಕರಗಿಸಿ ಗಟ್ಟಿಯಾಗಿ ಮಾಡಿಕೊಂಡು ಮನೆಯಲ್ಲಿ ಬಚ್ಚಿಟ್ಟಿದ್ದ ಒಟ್ಟು ಸುಮಾರು ₹22.50 ಲಕ್ಷ ಮೌಲ್ಯದ 161 ಗ್ರಾಂ ಚಿನ್ನಾಭರಣ ಮತ್ತು ಚಿನ್ನದ ಗಟ್ಟಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಹಾಗೂ ಮಾಲು ಪತ್ತೆಗಾಗಿ ಉಪವಿಭಾಗದ ಡಿವೈಎಸ್‌ಪಿ ಪ್ರಕಾಶ್ ರಾಥೋಡ್ ಅವರ ಮೇಲ್ವಿಚಾರಣೆ ಯಲ್ಲಿ, ನಗರ ವೃತ್ತದ ಸಿಪಿಐ ನಾಗಮ್ಮ ಅವರ ಮಾರ್ಗದರ್ಶನದಲ್ಲಿ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯ ಪಿಎಸ್‌ಐ ಸಿದ್ದಪ್ಪ ಎಂ.ಪಿ. ಹಾಗೂ ಸಿಬ್ಬಂದಿಗಳಾದ ಆದರ್ಶ ಶೆಟ್ಟಿ, ಮನ್ಸೂದ್ ಖಾನ್, ಆಸ್ಟೀನ್, ಕಾಂತರಾಜ ಬಿ.ಎನ್. ಹಣಮಂತ ಅವಟಿ, ಸುನೀತಾ, ಶ್ರೀಧರ ರವರ ಒಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು.

ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ತಂಡದ ಕಾರ್ಯವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಅವರು ಪ್ರಶಂಸಿಸಿ ಅಭಿನಂದಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು