ವಿಜಯ ಸಂಘರ್ಷ /ಭದ್ರಾವತಿ
ಕರ್ತವ್ಯ ನಿರತ ವೈದ್ಯರು ಕಪ್ಪು ಪಟ್ಟಿ ಧರಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಆರೋಗ್ಯ ಸೇವೆಗಳ ಸಿಬ್ಬಂದಿ ಮತ್ತು ವೈದ್ಯಕೀಯ ಸಂಸ್ಥೆಗಳು(ಹಿಂಸೆ ಮತ್ತು ಆಸ್ತಿಗೆ ಹಾನಿ ನಿಷೇಧ) ಮಸೂದೆ-2019 ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಸಮಾಜ ವಿರೋಧಿ ಶಕ್ತಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಕೋವಿಡ್-19 ರ ಪರಿಣಾಮ ಮೃತಪಟ್ಟ ವೈದ್ಯರನ್ನು ಕೋವಿಡ್ ಹುತಾತ್ಮರೆಂದು ಗುರುತಿಸಬೇಕು. ಹುತಾತ್ಮ ಯೋಧರನ್ನು ಗುರುತಿಸಲು ಮತ್ತು ಪರಿಶೀಲಿಸಲು ಕೇಂದ್ರೀಯ ಆರೋಗ್ಯ ಗುಪ್ತಚರ ಬ್ಯೂರೋ(ಸಿಬಿಎಚ್‌ಐ) ಮೂಲಕ ಪರಿಣಾಮ ವ್ಯವಸ್ಥೆಯನ್ನು ರೂಪಿಸಬೇಕು. ಹುತಾತ್ಮ ವೈದ್ಯರ ಕುಟುಂಬಗಳಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡಬೇಕೆಂದು ಮನವಿ ಮಾಡಲಾಗಿದೆ.
ಪ್ರಸ್ತುತ ಕೊರೋನಾ ಸೋಂಕು ಎದುರಿಸಲು ಲಸಿಕೆಯೊಂದೇ ಪರಿಣಾಮಕಾರಿ ವಿಧಾನ ಎಂಬುದು ಬಹುತೇಕ ಸಾಬೀತಾಗಿದ್ದು, ಹೆಚ್ಚಿನ ಪ್ರಾಣ ಹಾನಿ, ಸೋಂಕಿನ ತೀವ್ರತೆ ತಡೆಯಲು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಬೇಕು. ಕೋವಿಡ್-19 ರ ನಂತರ ಎದುರಾಗಿರುವ ಸಮಸ್ಯೆಗಳನ್ನು ಸಂಪೂರ್ಣವಾಗಿ ಅರಿಯಲು ಅಧ್ಯಯನ ಮಾಡಲು ಮತ್ತು ಔಷಧದ ಎಲ್ಲಾ ವಿಭಾಗಗಳಲ್ಲಿ ಬಹುಮುಖಿ ಚಿಕಿತ್ಸಾ ಮಾರ್ಗಸೂಚಿಗಳನ್ನು ಹೊರತರಲು ಪ್ರತ್ಯೇಕ ಸಂಶೋಧನಾ ಕೋಶವನ್ನು ಸ್ಥಾಪಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಐಎಂಎ ತಾಲೂಕು ಶಾಖೆ ಅಧ್ಯಕ್ಷೆ ಡಾ. ವೀಣಾ ಎಸ್. ಭಟ್, ಕಾರ್ಯದರ್ಶಿ ಡಾ. ಎಂ.ಸಿ ಸ್ವರ್ಣಲತಾ, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ. ಡಾ. ಗ್ಲಾಡಿಸ್, ಡಾ. ನಿತೀನ್, ಡಾ. ಶಿವಪ್ರಕಾಶ್, ಡಾ. ಗುರುಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.