ನಾಳೆ ಎಸ್ಎಸ್ಎಲ್ ಸಿ ಪರೀಕ್ಷೆಗೆ ಸಕಲ ಸಿದ್ಧತೆ

 

ವಿಜಯ ಸಂಘರ್ಷ


ಭದ್ರಾವತಿ
: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ  ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಕೈಗೊಂಡಿದ್ದು, ಒಟ್ಟು 4488 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಎದುರಿಸಲಿದ್ದಾರೆಂದು ಬಿಇಓ ಟಿ.ಎನ್ ಸೋಮಶೇಖರಯ್ಯ ತಿಳಿಸಿದರು.

ಪತ್ರಿಕೆಯೊಂದಿಗೆ ಮಾತನಾಡಿದ ಅವರು  ಜು.19 ಮತ್ತು 22 ರಂದು ಎರಡು ದಿನ ಮಾತ್ರ ಈ ಬಾರಿ ಪರೀಕ್ಷೆ ನಡೆಯಲಿದೆ. ತಾಲೂಕಿನಾದ್ಯಂತ ಒಟ್ಟು 25 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 4488 ವಿದ್ಯಾರ್ಥಿ ಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ.

ಕೊರೋನಾ ಹಿನ್ನಲೆಯಲ್ಲಿ ಹೆಚ್ಚಿನ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೊರೋನಾ ಸೋಂಕಿಗೆ ಒಳಗಾದ ವಿದ್ಯಾರ್ಥಿಗಳಿಗೆ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಯಲ್ಲಿ ಪ್ರತ್ಯೇಕ ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಈ ಬಾರಿ 124 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿ ಸುತ್ತಿದ್ದು, ಈ ವಿದ್ಯಾರ್ಥಿಗಳಿಗೆ ಲೋಯರ್ ಹುತ್ತಾದ ಪೂರ್ಣಪ್ರಜ್ಞಾ ಶಾಲೆಯಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ವಲಸೆ ವಿದ್ಯಾರ್ಥಿಗಳಿಗೆ ವಾಸಸ್ಥಳದ ಸಮೀಪದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂದರು.

 ಮುನ್ನಚ್ಚರಿಕೆ ಕ್ರಮವಾಗಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಒಂದು ಕೊಠಡಿಯಲ್ಲಿ ಕೇವಲ 10 ರಿಂದ 12 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ವಿದ್ದು, ಒಂದು ಬೆಂಚಿಗೆ ಒಬ್ಬರಿಗೆ ಮಾತ್ರ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೂ ಇಲಾಖೆ ವತಿಯಿಂದ ಎನ್-95 ಮಾಸ್ಕ್ ವಿತರಿಸಲಾಗುವುದು ಎಂದರು.

ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಈ ಬಾರಿ ಓ.ಎಂ.ಆರ್ ಗುರುತು ಮಾಡುವ ಹೊಸ ಮಾದರಿ ಪರೀಕ್ಷೆಯನ್ನು ನಡೆಸುತ್ತಿದ್ದು, ಒಂದೇ ದಿನ 3 ವಿಷಯಗಳಿಗೆ ತಲಾ 1 ಗಂಟೆಯಂತೆ ಒಟ್ಟು 3 ಗಂಟೆ ಪರೀಕ್ಷೆ ನಡೆಯಲಿದೆ. ಒಂದೊಂದು ವಿಷಯಕ್ಕೂ ತಲಾ 40 ಅಂಕ ನಿಗದಿಪಡಿಸಲಾಗಿದ್ದು, ಒಟ್ಟು 120 ಅಂಕಗಳನ್ನು ಪ್ರಶ್ನೆ ಪತ್ರಿಕೆ ಒಳಗೊಂಡಿರುತ್ತದೆ.

ಜು.19 ರಂದು ಕೋರ್ ವಿಷಯಗಳಿಗೆ ಹಾಗು 22 ರಂದು ಭಾಷಾ ವಿಷಯಗಳಿಗೆ ಪರೀಕ್ಷೆ ನಡೆಯಲಿದ್ದು, ಈ ಬಾರಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣ ಗೊಳಿಸಲಾಗುವುದು. ಫಲಿತಾಂಶವನ್ನು ಗ್ರೇಡ್ ಮಾದರಿಯಲ್ಲಿ ನೀಡಲಾಗು ವುದು. ಈಗಾಗಲೇ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಅಭ್ಯಾಸದ ಉದ್ದೇಶದಿಂದ ಪ್ರತಿ ವಿಷಯವಾರು ಮಾದರಿ ಪ್ರಶ್ನೆ ಪ್ರತಿಕೆಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದ್ದು, ಪರೀಕ್ಷೆ ಬರೆಯುವ ವಿಧಾನಗಳನ್ನು ಸಹ ತಿಳಿಸಿಕೊಡಲಾಗಿದೆ ಎಂದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು