ದಲಿತ ಚಳವಳಿಗಳು ಸಮಾಜದ ಸಾಮರಸ್ಯ ಮೂಡಿಸುವ ಕೆಲಸ ಮಾಡಬೇಕು: ಡಾ.ಎಂ.ಬಿ. ಶ್ರೀನಿವಾಸ್

 

ವಿಜಯ ಸಂಘರ್ಷ


ಕೆ.ಆರ್. ಪೇಟೆ: ಬುದ್ಧ, ಬಸವ,  ಅಂಬೇಡ್ಕರ್ ಅವರ ಆಶಯಗಳಂತೆ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ನಾಗರಿಕ ಸಮಾಜದ ಎಲ್ಲರೂ ಮುಂದಾಗಬೇಕು. ದಲಿತ ಚಳವಳಿಗಳು ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡಬೇಕೇ ಹೊರತು ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡಬಾರದು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಡಾ.ಎಂ.ಬಿ. ಶ್ರೀನಿವಾಸ್ ಹೇಳಿದರು.



ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಪದಾಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು..

ದಲಿತರಲ್ಲಿ ಸ್ವಾಭಿಮಾನ ತುಂಬಿ ಸಂವಿಧಾನದ ಆಶಯಗಳ ಈಡೇರಿಕೆಗಾಗಿ ಆರಂಭವಾದ ದಸಂಸ  ಚಳವಳಿಯು ಇಂದು ದಿಕ್ಕು ತಪ್ಪುತ್ತಿದೆ. ದಲಿತರನ್ನೇ ಎತ್ತಿಕಟ್ಟಿ ಒಡೆದು ಆಳುವ ನೀತಿಯನ್ನು ಅನುಸರಿಸಲಾಗುತ್ತಿದೆ. ಚಳವಳಿಗಳು ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಸಮಾಜದ ದಿಕ್ಕು ತಪ್ಪಿಸಿ ಗ್ರಾಮೀಣ ಜನರ ನೆಮ್ಮದಿಯ ಜೀವನಕ್ಕೆ ಧಕ್ಕೆ ತರುವ ಕೆಲಸವನ್ನು ಯಾವುದೇ ಚಳವಳಿಗಳು ಮಾಡಬಾರದು ಎಂದರು.

ಡಾ.ಎಂ.ಬಿ.ಶ್ರೀನಿವಾಸ್ ಬುದ್ಧ, ಬಸವ ಅಂಬೇಡ್ಕರ್ ಅವರ ಆಶಯಗಳ ಈಡೇರಿಕೆಗೆ ದಲಿತ ಬಂಧುಗಳು ಸಂಘಟಿತ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

"ಆ:7 ರಂದು ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಅಭಿನಂದನಾ ಗ್ರಂಥ ಬಿಡುಗಡೆ"

ಆಗಷ್ಟ್ 7ರಂದು ಮಂಡ್ಯದಲ್ಲಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಜಯಂತಿ ಸಮಾರಂಭ ಹಾಗೂ ದಲಿತ ನಾಯಕ ಡಾ‌.ಎಂ.ಬಿ.ಶ್ರೀನಿವಾಸ್ ಅವರ 60ರ ಅಭಿನಂದನಾ ಸಮಾರಂಭ ಹಾಗೂ ದಲಿತರ ಅಂತರಾಳದ ಧ್ವನಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಕೆ.ಆರ್.ಪೇಟೆ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಬಂಧುಗಳು ಭಾಗವಹಿಸಬೇಕು ಎಂದು ಸಮಿತಿಯ ಜಿಲ್ಲಾ ಸಂಚಾಲಕ ಸಂತೋಷ್ ಕುಮಾರ್ ಮನವಿ ಮಾಡಿದರು.

ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸಭೆಯಲ್ಲಿ ಜಿಲ್ಲಾ ಸಂಚಾಲಕ ಜವರಯ್ಯ, ಪಾಂಡವಪುರ ಧರ್ಮ, ವಿಠಲಾಪುರ  ಗ್ರಾಪಂ ಉಪಾಧ್ಯಕ್ಷ ಗಣೇಶ್, ದಲಿತ ಮುಖಂಡರಾದ ಚಿಕ್ಕಗಾಡಿಗನಹಳ್ಳಿ ಪರಮೇಶ್, ಚಿನ್ನಸ್ವಾಮಿ, ಸೋಮರಾಜು, ನಿಂಗಯ್ಯ, ಧನುಷ್, ಧನಂಜಯ ಸೇರಿದಂತೆ ಕಾರ್ಯಕಾರಿ ಸಮಿತಿಯ ಸದಸ್ಯರು ಭಾಗವಹಿಸಿದ್ದರು.

ವರದಿ: ಸಿ.ಆರ್.ಜಗದೀಶ್,ಕೆ.ಆರ್. ಪೇಟೆ

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು