ಮೆಸ್ಕಾಂ ವಿಭಾಗೀಯ ಕಚೇರಿ ನೂತನ ಕಟ್ಟಡ ಉದ್ಘಾಟನೆ

 


ವಿಜಯ ಸಂಘರ್ಷ

ಭದ್ರಾವತಿ: ಮೆಸ್ಕಾಂನ ಎಲ್ಲಾ ಕಾರ್ಯಗಳಿಗೂ ಶಿವಮೊಗ್ಗಕ್ಕೆ ತೆರಳುವಂತ್ತಾಗಿತ್ತು. ಆದರೆ ವಿಭಾಗೀಯ ಕಚೇರಿ ಇಲ್ಲಿಯೇ ಇರುವುದರಿಂದ ಕಾರ್ಯಗಳು ಸುಗಮವಾಗಿ ನಡೆಯಲಿದೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.

ಅವರು ಇಂದು ನಗರದ ಜೆಪಿಎಸ್ ಕಾಲೋನಿಯಲ್ಲಿ ಸುಮಾರು 481.63 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿಭಾಗಿಯ ನೂತನ ಕಛೇರಿಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆಯೇ ತಮ್ಮನ್ನ ಭೇಟಿ ಮಾಡಿದ್ದ ಅಧಿಕಾರಿಗಳು ಇಲ್ಲಿಯೇ ವಿಭಾಗೀಯ ಕಛೇರಿ ಆರಂಭಗೊಂಡಲ್ಲಿ ಹೆಚ್ಚಿನ 



ಅನುಕೂಲವಾಗಲಿದೆ ಎಂದು ಹಲವು ಬಾರಿ ಗಮನಕ್ಕೆ ತರುವ ಮೂಲಕ ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ಅಂದಿನ ಇಂಧನ ಖಾತೆ ಸಚಿವ ಡಿ.ಕೆ ಶಿವಕುಮಾರ್ ರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು. ಇದರ ಪರಿಣಾಮ ವಿಭಾಗೀಯ ಕಛೇರಿ ಆರಂಭಕ್ಕೆ ಮಂಜೂರಾತಿ ಅಂದೇ ಲಭಿಸಿತು. ನಂತರದ ಬಿಜೆಪಿ ಸರ್ಕಾರ ನೂತನ ಕಟ್ಟಡ ನಿರ್ಮಿಸುವಲ್ಲಿ ಯಶಸ್ವಿ ಯಾಗಿದೆ. ಈ ಹಿನ್ನಲೆಯಲ್ಲಿ ಸಹಕರಿಸಿದ ಎರಡು ಸರ್ಕಾರಗಳಿಗೆ ಅಭಿನಂದನೆ ಸಲ್ಲಿಸಿದರು.

ಸಿಎಂ ಬಿ.ಎಸ್ ಯಡಿಯೂರಪ್ಪನವರ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ ತಾಲೂಕಿನಲ್ಲಿ ನಿರೀಕ್ಷಿತ ಮಟ್ಟದ ಲ್ಲಿ ನಡೆದಿಲ್ಲ. ಬಿಜೆಪಿ ಸರ್ಕಾರದ ಅವಧಿ ಯಲ್ಲಿ ಜಿಲ್ಲೆಗೆ ಬಿಡುಗಡೆ ಯಾಗಿರುವ ಅನುದಾನ ಗಮನಿಸಿದಾಗ ಇದು ಅರ್ಥವಾಗುತ್ತದೆ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಸಿಎಂ ಬಿ.ಎಸ್ ಯಡಿಯೂರಪ್ಪ ವರ್ಚ್ಯೂವಲ್ ಹೋಸ್ಟಿಂಗ್ ಮೂಲಕ ನೂತನ ಕಟ್ಟಡ ಉದ್ಘಾಟಿಸಿದರು.

ಮೆಸ್ಕಾಂ ಶಿವಮೊಗ್ಗ ವೃತ್ತದ ಅಧೀಕ್ಷಕ ಇಂಜಿನಿಯರ್ ಶಿವಪ್ರಸಾದ್, ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಪೊಲೀಸ್ ಉಪಾಧೀಕ್ಷಕ, ಐಪಿಎಸ್ ಅಧಿಕಾರಿ ಸಾಹಿಲ್ ಬಾಗ್ಲಾ, ಮೆಸ್ಕಾಂ ಸ್ಥಳೀಯ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಎಸ್ ಕಿಶೋರ್, ನಗರಸಭಾ ಸದಸ್ಯೆ ಜಯಶೀಲ, ವಿಜಯ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕ ಜಿ. ಆನಂದಕುಮಾರ್, ಹಟ್ಟಿ ಚಿನ್ನದ ಗಣಿ ಕಂಪನಿ ನಿರ್ದೇಶಕ ಕೂಡ್ಲಿಗೆರೆ ಎಸ್. ಹಾಲೇಶ್, ರೈಲ್ವೆ ಸಲಹಾ ಸಮಿತಿ ಸದಸ್ಯ ಎನ್. ವಿಶ್ವನಾಥರಾವ್ ಹಾಗು ಬಿಜೆಪಿ ಪಕ್ಷದ ಮುಖಂಡರು ಮತ್ತು ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು