ಶಿವಮೊಗ್ಗ ಜಿಲ್ಲೆಯ ಮುಖ್ಯಮಂತ್ರಿಗಳಿಗಿಲ್ಲ ಪೂರ್ಣಾವಧಿ ಅಧಿಕಾರ ಯೋಗ..!

 


ವಿಜಯ ಸಂಘರ್ಷ

ಶಿವಮೊಗ್ಗ: ರಾಜ್ಯ ರಾಜಕಾರಣದ ಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿರುವ
ಜಿಲ್ಲೆಯು, ರಾಜ್ಯಕ್ಕೆ ಅತೀ ಹೆಚ್ಚಿನ ‘ಮುಖ್ಯಮಂತ್ರಿ’ ಗಳನ್ನು ನೀಡಿದ
ಹೆಗ್ಗಳಿಕೆ ಹೊಂದಿದೆ. ಆದರೆ ಸಿಎಂ ಹುದ್ದೆಗೇರಿದ ಜಿಲ್ಲೆಯ ನಾಲ್ವರು ನಾಯಕರಿಗೂ 5 ವರ್ಷಗಳ ಪೂರ್ಣಾವಧಿ ಅಧಿಕಾರ ಲಭ್ಯವಾಗಿಲ್ಲ!

ಜಿಲ್ಲೆಯವರಾದ ಕಡಿದಾಳು ಮಂಜಪ್ಪ, ಎಸ್.ಬಂಗಾರಪ್ಪ, ಜೆ.ಹೆಚ್.ಪಟೇಲ್ ಹಾಗೂ ಬಿ.ಎಸ್.ಯಡಿಯೂರಪ್ಪ ರವರು ಸಿಎಂ ಆಗಿ ಕಾರ್ಯನಿರ್ವಹಿಸಿ ದ್ದಾರೆ. ಇದರಲ್ಲಿ ಮೂವರು ನಾಯಕ ರಿಗೆ ಸಿಕ್ಕ ಅವಕಾಶ ಕಡಿಮೆಯಿತ್ತು. ಆದರೆ ಬಿ.ಎಸ್.ಯಡಿಯೂರಪ್ಪರಿಗೆ ಒಮ್ಮೆ 5ವರ್ಷ ಅಧಿಕಾರ ಪೂರೈಸುವ ಅವಕಾಶ ಲಭ್ಯವಾಗಿತ್ತು.ಆದರೆ ಅರ್ಧಕ್ಕೆ ಹುದ್ದೆಯಿಂದ ನಿಗರ್ಮಿಸಿದ್ದರು.

ಕಡಿದಾಳು ಮಂಜಪ್ಪ: ಗಾಂಧೀವಾದಿ ಎಂದೇ ಖ್ಯಾತರಾದವರು. ಕಾಂಗ್ರೆಸ್ ನಿಂದ 1952 ರಲ್ಲಿ ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಸಿಎಂ ಆಗಿ ನಾಲ್ಕೂವರೆ ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ಕೆಂಗಲ್ ಹನುಮಂತಯ್ಯರವರು ಹುದ್ದೆಗೆ ರಾಜೀನಾಮೆ ನೀಡಿದ್ದರು.
1956 ಆಗಸ್ಟ್ 19 ರಿಂದ ಅಕ್ಟೋಬರ್ 31 ರವರೆಗೆ 73 ದಿನಗಳ ಕಾಲ ಕಡಿದಾಳು ಮಂಜಪ್ಪ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲಿಗೆ ಸರ್ಕಾರದ 5 ವರ್ಷ ಅವಧಿ
ಪೂರ್ಣಗೊಂಡಿತ್ತು.

ಎಸ್.ಬಂಗಾರಪ್ಪ: ವರ್ಣರಂಜಿತ ರಾಜಕಾರಣಿ ಎಂದೇ ಬಿರುದಾಂಕಿತ ರಾದವರು.1989 ರಲ್ಲಿ ಸೊರಬ
ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಕಣಕ್ಕಿಳಿದು ಆಯ್ಕೆಯಾಗಿದ್ದರು. ರಾಜಕೀಯ ಕಾರಣಗಳಿಂದ
ವಿರೇಂದ್ರ ಪಾಟೀಲ್ ರವರು ಸಿಎಂ ಆದ 314 ದಿನಗಳಲ್ಲಿಯೇ ಹುದ್ದೆಗೆ
ರಾಜೀನಾಮೆ ನೀಡಿದ್ದರು. 1990 ರ ಅಕ್ಟೋಬರ್ 17 ರಿಂದ 1992 ರ ನವೆಂಬರ್ 19 ರವರೆಗೆ
(2 ವರ್ಷ 33 ದಿನ) ರವರೆಗೆ ಎಸ್.ಬಂಗಾರಪ್ಪ ಸಿಎಂ ಆಗಿದ್ದರು. ರಾಜಕೀಯ ಕಾರಣಗಳಿಂದ
ಸಿಎಂ ಹುದ್ದೆ ಕಳೆದುಕೊಂಡಿದ್ದರು.

ಜೆ.ಹೆಚ್.ಪಟೇಲ್: ಸಮಾಜವಾದಿ ಹೋರಾಟಗಾರರಾಗಿದ್ದರು. ಈ ಹಿಂದೆ ಶಿವಮೊಗ್ಗ ಜಿಲ್ಲೆಯಭಾಗವಾಗಿದ್ದ ಚನ್ನಗಿರಿ (ಪ್ರಸ್ತುತ ದಾವಣಗೆರೆ ಜಿಲ್ಲೆಯ ತಾಲೂಕು) ವಿಧಾನಸಭಾ
ಕ್ಷೇತ್ರದಿಂದ ಜನತಾದಳ ಅಭ್ಯರ್ಥಿ ಯಾಗಿ ಕಣಕ್ಕಿಳಿದು ಆಯ್ಕೆಯಾಗಿದ್ದರು. ಆಗ ಸಿಎಂ ಆಗಿದ್ದ ಹೆಚ್.ಡಿ.ದೇವೇಗೌಡ ರವರು ಪ್ರಧಾನಮಂತ್ರಿ ಹುದ್ದೆಗೇರಿ ದ್ದರು. ಜೆ.ಹೆಚ್.ಪಟೇಲ್ ರವರಿಗೆ ಸಿಎಂ ಗದ್ದುಗೆಯೇರುವ ಅವಕಾಶ ಲಭಿಸಿತ್ತು. 1996 ರ ಮಾರ್ಚ್ 31 ರಿಂದ 1999 ರ
ಅಕ್ಟೋಬರ್ 7 ರವರೆಗೆ (3 ವರ್ಷ 129) ಸಿಎಂ ಆಗಿದ್ದರು. ಅಲ್ಲಿಗೆ ಜನತಾದಳ ಸರ್ಕಾರದ 5
ವರ್ಷ ಅವಧಿ ಪೂರ್ಣಗೊಂಡಿತ್ತು.

ಬಿ.ಎಸ್.ಯಡಿಯೂರಪ್ಪ: ರಾಜ್ಯದಲ್ಲಿ ಅತೀ ಹೆಚ್ಚು ಬಾರಿ ಸಿಎಂ ಹುದ್ದೆಗೇರಿದ
ಹೆಗ್ಗಳಿಕೆ ಇವರದ್ದು. ಬಿಜೆಪಿಯ ಹಿರಿಯ ನಾಯಕರಾಗಿದ್ದಾರೆ. ಶಿಕಾರಿಪುರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗುತ್ತ ಬಂದಿದ್ದಾರೆ. ಮೊದಲ ಬಾರಿಗೆ 2007 ರಲ್ಲಿ 7 ದಿನಗಳ ಕಾಲ
ಸಿಎಂ ಆಗಿದ್ದರು. ಜೆಡಿಎಸ್ ಬೆಂಬಲಿಸದ ಕಾರಣದಿಂದ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. ಎರಡನೇ ಬಾರಿ, 2008 ರ ಮೇ 30 ರಂದು ಮತ್ತೆ ಸಿಎಂ ಆಗಿ ಅವರು ಅಧಿಕಾರ ಸ್ವೀಕರಿಸಿದ್ದರು. 5 ವರ್ಷ ಅಧಿಕಾರ ಪೂರೈಸುವ ಅವಕಾಶ ಲಭ್ಯವಾಗಿತ್ತು. ಆದರೆ 2011
ಜುಲೈ 31 (3 ವರ್ಷ 62 ದಿನ) ರಂದು ಸಿಎಂ ಹುದ್ದೆಯಿಂದ ನಿರ್ಗಮಿಸಿದ್ದರು. ಮೂರನೇ ಬಾರಿ, 2018 ರ ಮೇ 17 ರಂದು ಸಿಎಂ ಸ್ಥಾನಕ್ಕೇರಿದ್ದರು. ಆದರೆ ಸ್ಪಷ್ಟ ಬಹುಮತವಿಲ್ಲದ ಕಾರಣದಿಂದ, ಕೇವಲ 55 ಗಂಟೆಗಳ ಅವಧಿ ಯಲ್ಲಿಯೇ ಹುದ್ದೆಯಿಂದ ನಿರ್ಗಮಿಸಿದ್ದರು.

ರಾಜೀನಾಮೆ: 2019 ರ ಜುಲೈ 26 ರಂದು ಬಿಎಸ್’ವೈ ನಾಲ್ಕನೇ ಬಾರಿ ಸಿಎಂ ಗದ್ದುಗೆಯೇರಿದ್ದರು. ಇನ್ನೂ 21 ತಿಂಗಳ ಅಧಿಕಾರವಿತ್ತು. 2 ವರ್ಷಕ್ಕೆ ರಾಜೀನಾಮೆ ನೀಡುವಂತಾಗಿದೆ.

ವರದಿ : ಬಿ.ರೇಣುಕೇಶ್. ಶಿವಮೊಗ್ಗ

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು