ವಿಜಯ ಸಂಘರ್ಷ
ಬೆಂಗಳೂರು: ಕಾಂತರಾಜ್ ವರದಿಯನ್ನು ಜಾರಿಗೆ ತನ್ನಿ ಹಾಗೂ ಬಲಿಷ್ಠ ಸಮುದಾಯಗಳನ್ನು ಪ್ರವರ್ಗ 2 ಎ ಗೆ ಸೇರಿಸಬಾರದಂತೆ ಆಗ್ರಹಿಸಿ ಇಂದು ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ವತಿಯಿಂದ ಸಿಎಂ
ಬಸವರಾಜ್ ಬೊಮ್ಮಾಯಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಎಂ.ಸಿ ವೇಣುಗೋಪಾಲ್ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ನಡೆಸಿರುವ ಕಾಂತರಾಜ್ ವರದಿಯನ್ನು ಜಾರಿಗೊಳಿಸಬೇಕು. ಆ ಮೂಲಕ ಜಾತಿಗೆ ಅನುಗುಣವಾಗಿ ಸರಕಾರದಲ್ಲಿ ಅನುಕೂಲವಾಗಬೇಕು ಎನ್ನುವುದು ಉದ್ದೇಶವಾಗಿದೆ. ಅಲ್ಲದೆ, 2 ಎ ಗೆ ಪ್ರಬಲ ಜಾತಿಗಳನ್ನು ಸೇರಿಸಬಾರದು. ಅಲ್ಲದೆ ಅತಿ ಹಿಂದುಳಿದ ವರ್ಗಗಳ ಮಠ ಸಂಘ ಸಂಸ್ಥೆಗಳಿಗೆ ಪ್ರಬಲ ಜಾತಿಗಳಿಗೆ ಹೆಚ್ಚಿನ ಅನುದಾನ ನೀಡುವುದು, ಸಮುದಾಯ ಭವನ ವಿದ್ಯಾರ್ಥಿ ಭವನ ಸ್ಥಾಪನೆಗೆ ಅನುಕೂಲ ಮಾಡುವ ಕುರಿತ ಪ್ರಸ್ತಾವನೆ ಜಾರಿಗೆ ತರಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.
ವೇದಿಕೆ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಈ ನಾಡಿನಲ್ಲಿ ಆತಿ ಸಣ್ಣ ಹಾಗೂ ಅತಿ ಸೂಕ್ಷ್ಮ ಸಮುದಾಯ ಗಳಿವೆ, ಧ್ವನಿಯೇ ಇಲ್ಲದ ಅಸಂಘಟಿತ ಸಮುದಾಯಗಳು ತಮಗೆ ಆಸ್ಮಿತೆಯೇ ಇಲ್ಲದೆ ಸರ್ಕಾರದ ಯಾವುದೇ ನೆರವು, ಸಹಕಾರ, ಅನುದಾನ, ಮೀಸಲಾತಿ ಗಳನ್ನು ಪಡೆಯುವುದರಲ್ಲಿ ವಿಫಲ ವಾಗಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವನ್ನು ಹೊರತುಪಡಿಸಿ, ಧಾರ್ಮಿಕ ಅಲ್ಪ ಸಂಖ್ಯಾತರನ್ನು ಒಳಗೊಂಡಂತೆ "ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಐದು ಪ್ರವರ್ಗಗಳಿವೆ, ಐದೂ ಪ್ರವರ್ಗಗಳಿಗೆ ಶೇಕಡಾ 32% ಮೀಸಲಾತಿ ಇದೆ, ಅದರಲಿ, ಪ್ರವರ್ಗ ಒಂದರಲ್ಲಿ 95 ಜಾತಿಗಳಿದ್ದು 4% ಮೀಸಲಾತಿ ಇದೆ ಅಂತೆಯೇ ಪ್ರವರ್ಗ 2(a) ನಲ್ಲಿ 102 ಜಾತಿಗಳಿದ್ದು, 15% ಮೀಸಲಾತಿ ಇದೆ. ಪ್ರವರ್ಗ 2(b) ನಲ್ಲಿ ಮುಸ್ಲಿಂ ಸಮುದಾಯವಿದ್ದು ಶೇಕಡಾ 4% ಮೀಸಲಾತಿ ಇದೆ. ಪ್ರವರ್ಗ 3(a) ನಲ್ಲಿ ಒಕ್ಕಲಿಗರು ಮತ್ತಿತರಿದ್ದು ಶೇಕಡಾ 4% ಮತ್ತು ಪ್ರವರ್ಗ 3(b) ನಲ್ಲಿ ವೀರಶೈವ ಲಿಂಗಾಯಿತ ಮತ್ತಿತರ ಜಾತಿಗಳಿದ್ದು ಶೇಕಡಾ 5% ಮೀಸಲಾತಿ ಇದೆ. ಪಟ್ಟಿಯಲ್ಲಿರುವ ಬಲಿಷ್ಟ ಮತ್ತು ಸಂಘಟಿತ ಜಾತಿಗಳು ಸಹಜವಾಗಿಯೇ ಪ್ರಾತಿನಿದ್ಯದ ಫಲಗಳನ್ನು ಕಾಣುತ್ತಿದ್ದು, ಪ್ರವರ್ಗ ಒಂದು ಮತ್ತು 2(a) ನಲ್ಲಿರುವ ಅತಿ ಹಿಂದುಳಿದ ಜಾತಿಗಳು ಅವಕಾಶ ವಂಚಿತವಾಗಿವೆ.
ಈ ಹಿನ್ನಲೆಯಲ್ಲಿ ಎಲ್ಲಾ ಪ್ರವರ್ಗ ಗಳನ್ನು ಪುನರ್ ವರ್ಗೀಕರಣ ಮಾಡುವ ಅವಶ್ಯಕತೆ ಇದೆ. ಇದರೊಂದಿಗೆ ಪ್ರವರ್ಗಗಳು ಹಿಂದುಳಿದ ವರ್ಗಗಳ ಯಾವುದೇ ಆಯೋಗದ ಶಿಫಾರಸಿನ ಮೇಲೆ ಆದವುಗಳಲ್ಲ. ಈ ಕಾರಣಕ್ಕೆ ಇಲ್ಲಿನ ವರ್ಗೀಕರಣ ಅತ್ಯಂತ ಅವೈಜ್ಞಾನಿಕವಾದುದು ಮತ್ತು ಕುಲಶಾಸ್ತ್ರೀಯ ಅಧ್ಯಯನದ ದೃಷ್ಟಿಯಿಂದಲೂ ಅಸಮರ್ಪಕ ವಾದದ್ದು ಎಂದರು.
ವೇದಿಕೆಯ ಗೌರವ ಸಲಹೆಗಾರ ಡಾ.ಸಿ ಎಸ್ ದ್ವಾರಕಾನಾಥ್ ಮಾತನಾಡಿ, ರಾಜ್ಯದಲ್ಲಿ ಅತಿ ಹಿಂದುಳಿದ ಜಾತಿಗಳಿಗೆ ಸಮರ್ಪಕವಾದಂತಹ ಧ್ವನಿ ಎತ್ತುವಂತಹ ಜನರಿಲ್ಲ. ಈ ವರ್ಗಗಳಿಗೆ ದೊರೆಯ ಬೇಕಾದ ಮೀಸಲಾತಿ ಕಿತ್ತು ಪ್ರಬಲ ಜಾತಿಗಳಿಗೆ ಅವಕಾಶ ಮಾಡಿಕೊಡುವುದು ಸರಿಯಲ್ಲ ಎನ್ನುವುದನ್ನು ಮುಖ್ಯಮಂತ್ರಿಗಳು ಹಾಗೂ ಸಚಿವರ ಗಮನಕ್ಕೆ ತಂದಿದ್ದೇವೆ. ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಎಂ.ಎಲ್.ಸಿ. ಪಿ.ಆರ್ ರಮೇಶ್,ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ವೇದಿಕೆಯ ಅಧ್ಯಕ್ಷ ಎಂ ಸಿ ವೇಣು ಗೋಪಾಲ್, ಗೌರವ ಸಲಹೆಗಾರ ಡಾ. ಸಿ ಎಸ್ ದ್ವಾರಕಾನಾಥ್ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795