ವಿಜಯ ಸಂಘರ್ಷ
ಭದ್ರಾವತಿ: ಪರಿಶಿಷ್ಠ ಜಾತಿಯಲ್ಲಿ ಒಳ ಮೀಸಲಾತಿಗೆ ಶಿಫಾರಸ್ಸು ಮಾಡಿರುವ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನ ಗೊಳಿಸಲಾಗುವುದು ಎಂದು ಹೇಳಿಕೆ ನೀಡಿರುವ ಕೇಂದ್ರ ಸಚಿವ ಎ.ನಾರಾ ಯಣಸ್ವಾಮಿ ರವರ ಹೇಳಿಕೆಯನ್ನು ತಾಲ್ಲೂಕು ಬಂಜಾರ ( ಲಂಬಾಣಿ) ಯುವಕರ ಸಂಘ ತೀವ್ರವಾಗಿ ಖಂಡಿಸಿದೆ.
ಈ ಸಂಬಂಧ ಇಂದು ಮಿನಿ ವಿಧಾನ ಸೌಧ ಮುಂಭಾಗ ಜಮಾಯಿಸಿದ ಸಂಘದ ಮುಖಂಡರು, ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳ ಜನರಲ್ಲೂ ಗೊಂದಲವಿದೆ. ಶೋಷಿತ ವರ್ಗಗಳ ಜನರ ಹಿತಾಸಕ್ತಿ ಕಾಪಾಡ ಬೇಕಾಗಿರುವ ಕೇಂದ್ರ ಸಚಿವರು ಕೇವಲ ಒಂದು ಸಮುದಾಯವನ್ನು ಪ್ರತಿನಿಧಿಸಿ ರುವಂತೆ ಹೇಳಿಕೆ ನೀಡಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿಸಿದರು.
ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುತ್ತೇವೆ ಎಂಬುದಾಗಿ ಪದೇ ಪದೇ ಹೇಳುತ್ತಿರುವುದರಿಂದ ಎಸ್ಸಿ ಪಟ್ಟಿಯಲ್ಲಿರುವ 101 ಜಾತಿಗಳ ಪೈಕಿ ಒಂದು ಸಮುದಾಯವನ್ನು ಹೊರತು ಪಡಿಸಿ ಇನ್ನುಳಿದ 100 ಸಮುದಾಯ ಗಳ ಜನರಲ್ಲಿ ಆತಂಕ ಹುಟ್ಟಿಸಿದ ಒಂದೇ ಜಾತಿಗೆ ಸೀಮಿತವಾಗಿ ಹೇಳಿಕೆ ನೀಡುತ್ತಿ ರುವ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಅಗ್ರಹಿಸಿದರು.
ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಿ ಅದರ ಸಾಧಕಭಾದಕಗಳನ್ನು ಸಮಗ್ರವಾಗಿ ಚರ್ಚಿಸಿ ಅಭಿಪ್ರಾಯ ತಿಳಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸಂಘದ ಯುವಘಟಕದ ಅಧ್ಯಕ್ಷ ಪಿ. ಕೃಷ್ಣನಾಯ್ಕ ನೇತೃತ್ವವಹಿಸಿದ್ದರು. ಮುಖಂಡರಾದ ಮಂಜನಾಯ್ಕ, ಹನುಮನಾಯ್ಕ, ಪ್ರವೀಣ್ ಕುಮಾರ್, ನಾಗಾನಾಯ್ಕ, ಹೇಮಂತ್, ಭಂಜನಿ ನಾಯ್ಕ, ಶಂಕ್ರನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795