ವಿಜಯ ಸಂಘರ್ಷ
ಶಿವಮೊಗ್ಗ: ಅತ್ಯಾಚಾರ ನಡೆಸು ವವರಿಗೆ ಭಯ ಹುಟ್ಟಿಸುವಂತಹ ಕಾನೂನು ಜಾರಿಗೆ ತರುವ ಕುರಿತು ಕ್ಯಾಬಿನೆಟ್ನಲ್ಲಿ ಸೂಕ್ತ ಚರ್ಚೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ತಾಲೂಕಿನ ಆಯನೂರು ಗ್ರಾಮದಲ್ಲಿ ಮಾತನಾಡಿದ ಅವರು, ಹಿಂದಿನ ಸಿಎಂ ಸಿದ್ದರಾಮಯ್ಯ, ಅಂದಿನ ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಅತ್ಯಾಚಾರಿಗಳ ವಿರುದ್ಧ ಕಾನೂನು ತಿದ್ದುಪಡಿ ಮಾಡಲಾಗುವುದು ಎಂದು ತಿಳಿಸಿದ್ದರು. ಆದರೆ ಆ ಕೆಲಸ ಮಾಡಲಾಗಿಲ್ಲ. ಅತ್ಯಾಚಾರ ನಡೆಸುವವರಿಗೆ ಕಾನೂನು ಹಾಗೂ ಪೊಲೀಸರ ಬಗ್ಗೆ ಭಯವಿಲ್ಲ. ಭಯ ಹುಟ್ಟಿಸುವಂತಹ ಕಾನೂನು ಜಾರಿಗೆ ತರಲಾಗುವುದು ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಅತ್ಯಾಚಾರ ಪ್ರಕರಣವನ್ನು ಭೇದಿಸಲು ಸಾಕಷ್ಟು ಶ್ರಮ ಹಾಕಿದ್ದಾರೆ. ಮೈಸೂರಿನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಬೆಂಗಳೂರಿನಲ್ಲಿ ಸರಣಿ ಸಭೆ ನಡೆಸಿದ್ದಾರೆ. ಕಿಡಿಗೇಡಿ, ನೀಚರನ್ನು ಹುಡುಕಿ ಬಂಧಿಸಿರುವುದು ನನಗೆ ಸಂತೋಷವಾಗಿದೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳ ಲಾಗುವುದು ಎಂದರು.
ಯಡಿಯೂರಪ್ಪ ಹಾಗೂ ನಾನು ಅಣ್ಣ ತಮ್ಮಂದಿರಂತೆ, ಅವರ ಮನೆಗೆ ನಾವು ಹೋಗುತ್ತೇವೆ, ಅವರು ನಮ್ಮ ಮನೆಗೆ ಬರುತ್ತಾರೆ. ನಾವೆಲ್ಲಾ ಒಂದೇ. ನೀವು ಸರಿಯಾಗಿ ನೋಡಬೇಕೆಂದು ಸುದ್ದಿಗಾರ ರನ್ನು ಕಿಚಾಯಿಸಿದರು. ಈ ವೇಳೆ ಸಂಸದ ರಾಘವೇಂದ್ರ, ಶಾಸಕ ಅಶೋಕ ನಾಯ್ಕ ಮತ್ತಿತರ ಮುಖಂಡರಿದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795