ವಿಜಯ ಸಂಘರ್ಷ
ಸಾಗರ : ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ನೂತನ ಸರ್ಕಾರದ ಸಚಿವ ಸ್ಥಾನ ಪಡೆಯುವವರ ಪಟ್ಟಿಯಲ್ಲಿ ನನ್ನ ಹೆಸರನ್ನು ಪರಿಗಣಿಸಲಾಗಿದೆ ಎಂದು ಶಾಸಕ ಎಚ್. ಹರತಾಳು ಹಾಲಪ್ಪ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ನೀಡುವಂತೆ ವರಿಷ್ಟರಲ್ಲಿ ಮನವಿ ಮಾಡಿದ್ದೇನೆ. ಸಚಿವರ ಪಟ್ಟಿಯಲ್ಲಿ ನನ್ನ ಹೆಸರು ಪರಿಗಣನೆ ಹಂತದಲ್ಲಿದೆ ಎನ್ನುವುದು ನನ್ನ ಗಮನದಲ್ಲಿದೆ. ನಾಲ್ಕು ತಾಲೂಕುಗಳಲ್ಲಿ ಮೂರು ಬಾರಿ ಶಾಸಕನಾಗಿದ್ದೇನೆ. ನನಗೂ ಅರ್ಹತೆ ಇದೆ. ಜಿಲ್ಲೆಯ ಎಲ್ಲ ಭಾಗಗಳ ಪರಿಚಯ ನನಗೆ ಇದೆ. ಪ್ರಭಾವಗಳಿಗೆ ದೆಹಲಿಗೆ ಹೋಗುವುದಿಲ್ಲ ಎಂದರು.
ನನ್ನ ಹೆಸರು ಸಚಿವ ಸ್ಥಾನಕ್ಕೆ ತೀರ ಸಮೀಪದಲ್ಲಿದೆ. ಆದರೆ ಬೆಂಬಲಿಗರು ನನಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಹೇಳಿರುವುದು ನನಗೆ ನಗೆ ತರಿಸಿದೆ ಎಂದರು.
ಎಂಟತ್ತು ಜನ ಹಿರಿಯರನ್ನು ಕೈ ಬಿಡುತ್ತಾರೆ ಎನ್ನುವ ಮಾಹಿತಿ ಇದೆ. ಬಿಜೆಪಿಯಲ್ಲಿ ಕೇವಲ ಜಾತಿ ಹಿನ್ನೆಲೆಯಲ್ಲಿ ಮಂತ್ರಿಸ್ಥಾನ ನೀಡುವುದು ಕಡಿಮೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸುವಂತೆ ಮಾಡುವಲ್ಲಿ ಈಡಿಗ ಸಮುದಾಯದ ಪಾತ್ರ ಪ್ರಮುಖ ವಾಗಿದೆ. ಈಗ ಈಡಿಗ ಸಮುದಾಯ ರಾಜಕೀಯವಾಗಿ ಬೇರೆ ಬೇರೆ ಕಡೆ ಚದುರಿ ಹೋಗುತ್ತಿದೆ. ಇಂತಹ ಸಂದರ್ಭದಲ್ಲಿ ನನಗೆ ಸಚಿವ ಸ್ಥಾನ ನೀಡಿದರೆ ಈಡಿಗ ಸಮುದಾಯವನ್ನು ಬಿಜೆಪಿಯಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹಿಂದಿನಿಂದಲೂ ಜಿಲ್ಲೆಯಲ್ಲಿ ಈಡಿಗ ಸಮುದಾಯಕ್ಕೆ ಎಲ್ಲ ಪಕ್ಷಗಳು ಸಚಿವ ಸ್ಥಾನ ನೀಡಿವೆ. ಈ ಹಿನ್ನೆಲೆಯಲ್ಲಿ ಸಾಗರ, ಹೊಸನಗರ, ಶಿಕಾರಿಪುರ ಭಾಗದಿಂದ ನನಗೆ ಸಚಿವ ಸ್ಥಾನ ಕೊಡಿ ಎಂದು ಪ್ರಮುಖರು ಸಹ ಒತ್ತಾಯಿಸುತ್ತಿದ್ದಾರೆ ಎಂದು ಹಾಲಪ್ಪ ಹೇಳಿದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795