ಬಡವರ ಉದ್ಧಾರ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ: ಮಧು ಬಂಗಾರಪ್ಪ

 

ವಿಜಯ ಸಂಘರ್ಷ



ಶಿವಮೊಗ್ಗ: ಕಾಂಗ್ರೆಸ್ ಪಕ್ಷವನ್ನು ಬೆಳೆಸಿ ಅಧಿಕಾರಕ್ಕೆ ತರಲು ಎಲ್ಲರೂ ಒಟ್ಟಾಗಿ  ಶ್ರಮಿಸೋಣ ಎಂದು ಸೊರಬ ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.

ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.



ಜೆಡಿಎಸ್ ನಲ್ಲಿದ್ದ ನಾವು ಕಾಂಗ್ರೆಸ್ ಪಕ್ಷವನ್ನು ಸೇರಿರುವುದಕ್ಕೆ ಮುಖ್ಯವಾದ ಕಾರಣ ಇದು ಬಡವರ ಪಕ್ಷ, ಬಡವರ ಉದ್ಧಾರ ಆಗುವುದೇ ಆದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಪಕ್ಷ  ಅಧಿಕಾರದಲ್ಲಿದ್ದಾಗ ಬಡವರಿಗಾಗಿ ನೂರಾರು ಯೋಜನೆಗಳನ್ನು ಜಾರಿಗೆ ತಂದಿದೆ. ಜನನಾಯಕರಾಗಿದ್ದ ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ದಿವಂಗತ : ಎಸ್. ಬಂಗಾರಪ್ಪ ಅವರೂ ಹಲವು ಯೋಜನೆಗಳನ್ನು ತಂದವರು. ಅಂತಹವರ ಮಗನಾದ ನಾನೂ ಅವರ ಹಾದಿಯಲ್ಲೇ ಸಾಗುತ್ತೇನೆ ಎಂದು ಹೇಳಿದರು.

ಹಿರಿಯ ಮುಖಂಡರು ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರೊಂದಿಗೆ ಸೇರಿಕೊಂಡು ಪಕ್ಷವನ್ನು ಮತ್ತಷ್ಟು ಬಲಪಡಿಸಿ ಜಿಲ್ಲೆಯಲ್ಲಿ ಕಳೆದುಕೊಂಡಿರುವ  ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸುತ್ತೇವೆ. ಈಗಿನ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುತ್ತೇವೆ. ಬೇರುಮಟ್ಟದಿಂದ ಪಕ್ಷವನ್ನು ಬೆಳೆಸೋಣ. ಹೋರಾಟಗಳು ಅನಿವಾರ್ಯವಾದರೆ ಜಿಲ್ಲೆಯಿಂದಲೇ ಹೋರಾಟ ಮಾಡೋಣ ಎಂದರು.

ಕೇವಲ ಅಧಿಕಾರಕ್ಕಾಗಿ ಮಾತ್ರವಲ್ಲ, ಜನರ ಕಷ್ಟಗಳಿಗಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ. ಅಧಿಕಾರ, ಅಧಿಕಾರದ ಅಹಂಕಾರದಿಂದ ಮೆರೆಯುತ್ತಿರುವ ಬಿಜೆಪಿ ಸರ್ಕಾರಕ್ಕೆ ಜನರ ಮೂಲಕವೇ ಉತ್ತರ ಕೊಡೋಣ ಎಂದರು.

 ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರನ್ನು ಕರೆಸಿ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಸಮಾವೇಶದ ಮೂಲಕ ಪಕ್ಷ ಸೇರಬೇಕು ಎಂದುಕೊಂಡಿದ್ದೆ. ಆದರೆ, ಕೋವಿಡ್ ಹಿನ್ನಲೆಯಲ್ಲಿ ಅದು ಸಾಧ್ಯವಾಗಲಿಲ್ಲ. ಆದರೂ ಇಂದು ಎಲ್ಲ ನಾಯಕರು ನನ್ನನ್ನು ಪ್ರೀತಿಯಿಂದ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಪ್ರಾಥಮಿಕ ಸದಸ್ಯತ್ವವನ್ನು ಪಡೆದಿದ್ದೇನೆ. ನಿಮ್ಮ ಪ್ರೀತಿಗೆ ನನ್ನ ಕೃತಜ್ಞತೆಗಳು ಎಂದರು.

ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ಮಾತನಾಡಿ, ಮಧು ಬಂಗಾರಪ್ಪ ಪಕ್ಷಕ್ಕೆ ಬಂದಿರುವುದು ಮತ್ತಷ್ಟು ಬಲ ಬಂದಂತಾಗಿದೆ. ಅದಲ್ಲದೇ ಆರ್.ಎಂ. ಮಂಜುನಾಥಗೌಡರು ಕೂಡ ಪಕ್ಷಕ್ಕೆ ಬಂದಿದ್ದಾರೆ. ಈ ಎರಡೂ ಶಕ್ತಿಗಳನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಪ್ರಬಲವಾಗಿ ಸಂಘಟಿಸು ವುದಾಗಿ ತಿಳಿಸಿ, ಆಡಳಿತ ಪಕ್ಷದ ಹುನ್ನಾರಗಳನ್ನು, ಕೇಂದ್ರ, ರಾಜ್ಯ ಸರ್ಕಾರಗಳ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕರಾದ ಬಿ.ಕೆ. ಸಂಗಮೇಶ್, ಆರ್. ಪ್ರಸನ್ನಕುಮಾರ್, ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಬೇಳೂರು ಗೋಪಾಲಕೃಷ್ಣ, ಮುಖಂಡರಾದ ಡಾ. ಆರ್.ಎಂ. ಮಂಜುನಾಥ ಗೌಡ, ಎಸ್.ಪಿ. ದಿನೇಶ್, ಶ್ರೀನಿವಾಸ್ ಕರಿಯಣ್ಣ,ಜಿ ಡಿ ಮಂಜುನಾಥ್ ಮತ್ತಿತರರಿದ್ದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು