ವಿಜಯ ಸಂಘರ್ಷ
ಚಾಮರಾಜನಗರ (ಕೊಳ್ಳೇಗಾಲ): ತಾಲೂಕಿನ ಪ್ರಸಿದ್ಧ ಪ್ರವಾಸ ಸ್ಥಳ ಭರಚುಕ್ಕಿ ಜಲಪಾತ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ 112 ತುರ್ತು ವಾಹನದ ಕುರಿತು ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಜಾಗೃತಿ ಮೂಡಿಸಿದರು.
ತಾಲೂಕಿನ ಶಿವನಸಮುದ್ರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣವಾದ ಭರಚುಕ್ಕಿ ಜಲಪಾತದ ಸವಿಯನ್ನು ಸವಿಯು ವುದಕ್ಕೆ ಪ್ರವಾಸಿಗರು ಹೆಚ್ಚಾಗಿ ಬರುತ್ತಿರುವುದರಿಂದ ಪ್ರವಾಸಿಗರ ಭದ್ರತೆ ಹಾಗೂ ರಕ್ಷಣೆ ದೃಷ್ಟಿಯಿಂದ 112 ತುರ್ತು ವಾಹನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ಮಾಡಿ ಮಾತನಾಡಿದ, ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿವರಾಜ್ ಆರ್ ಮುಧೋಳ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಉಂಟಾದಲ್ಲಿ ಅಥವಾ ಇನ್ನಾವುದೇ ತುರ್ತು ಪರಿಸ್ಥಿತಿ ಉಂಟಾದಲ್ಲಿ ತಕ್ಷಣ 112 ಕ್ಕೆ ಕರೆ ಮಾಡಿದರೆ ತಕ್ಷಣ ಸ್ಥಳಕ್ಕೆ ನಮ್ಮ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂದು ಜಾಗೃತಿ ಮೂಡಿಸಿದರು.
ನಂತರ ಸಾರ್ವಜನಿಕರನ್ನು ಕುರಿತು ಮಾತನಾಡಿದ ಸಬ್ ಇನ್ಸ್ಪೆಕ್ಟರ್ ಅಶೋಕ್, ಭರಚುಕ್ಕಿ ಜಲಪಾತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದರಿಂದ ಮತ್ತು ಮಾರ್ಗ ಮಧ್ಯದಲ್ಲಿರುವ ಮಾರಮ್ಮನ ದೇವಸ್ಥಾನಕ್ಕೆ ಭಕ್ತರು ಬರುವುದರಿಂದ ಆಕಸ್ಮಿಕ ಅಪಘಾತಗಳು, ಕಳ್ಳತನದಂತಹ ಅಪರಾಧ ಚಟುವಟಿಕೆ ನಡೆಯಬಹುದು, ಅಂತಹ ಸಂದರ್ಭದಲ್ಲಿ ಸಾರ್ವಜನಿಕರು ಭಯ ಪಡದೆ ಎಚ್ಚೆತ್ತುಕೊಂಡು 112 ಕ್ಕೆ ಕರೆ ಮಾಡಿದ್ದಲ್ಲಿ ತಕ್ಷಣ ಅನಾಹುತಗಳನ್ನು ತಪ್ಪಿಸಬಹುದು ಎಂದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಕ್ರೈಂ ಸಬ್ ಇನ್ಸ್ಪೆಕ್ಟರ್ ವೀರಣ್ಣ ಆರಾಧ್ಯ, ಚೇತನ್, ಸಿಬ್ಬಂದಿಗಳಾದ ಶಿವಕುಮಾರ್, ಗುರುಸ್ವಾಮಿ, ರಮೇಶ್ (ಗೃಹರಕ್ಷಕ) ಇದ್ದರು.
ವರದಿ: ಪ್ರಭುಸ್ವಾಮಿ ಎಂ, ಹನೂರು.
ವಿಜಯ ಸಂಘರ್ಷಕ್ಕೆ ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795