ವಿಜಯ ಸಂಘರ್ಷ
ಶಿವಮೊಗ್ಗ : ನನ್ನ ಸಾವಿಗೆ ಹಿರಿಯ ಅಧಿಕಾರಿಯೇ ಕಾರಣ ಎಂದು ಡಿಸಿ ಕಚೇರಿಯ ಕೆಎಲ್ ಎಲ್ ಎಡಿಎಸ್ ಶಾಖೆಯ ಗಿರಿರಾಜ್ ಎಂಬುವರು ಡೆತ್ ನೋಟ್ ಬರೆದು ಕಾಣೆಯಾಗಿದ್ದಾರೆ.
ಕಳೆದ 18 ವರ್ಷಗಳಿಂದ ಡಿಸಿ ಕಚೇರಿ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಿರಿರಾಜ್, ಇಂದು ಬೆಳಗ್ಗೆ ತಾನು ವಾಸಿಸುವ ಸರ್ಕಾರಿ ನಿವಾಸದಿಂದ ಕಾಣೆಯಾಗಿದ್ದಾರೆ. ಗಿರಿರಾಜ್ ಶಾಸಕರು, ಸಂಸದರು ಹಾಗೂ ಪರಿಷತ್ ಸದಸ್ಯರ ಅನುದಾನ ಹಂಚಿಕೆಯ ಕೆಲಸ ಮಾಡುತ್ತಿದ್ದರು.
ಇಲ್ಲಿ ಅನುದಾನ ಸರಿಯಾಗಿ ಬಾರದ ಕಾರಣ ಹಣ ಬಿಡುಗಡೆಗೆ ನನ್ನ ಬಳಿ ಕಿರಿಕಿರಿ ಉಂಟು ಮಾಡುತ್ತಿದ್ದರು ಎಂದು ತಮ್ಮ ಕಚೇರಿಯ ವಾಟ್ಸ್ಆ್ಯಪ್ ಗ್ರೂಪ್ ನಲ್ಲಿ ಡೆತ್ ನೋಟ್ ಸೆಂಡ್ ಮಾಡಿ ಕಾಣೆಯಾಗಿದ್ದಾರೆ.
ಗಿರಿರಾಜ್ ಬರೆದ ಪತ್ರದ ಸಾರಾಂಶ :
ಮೇಲಾಧಿಕಾರಿಗಳು ನಮ್ಮಂತಹ ಕೆಳ ಹಂತದವರ ಮೇಲೆ ದಬ್ಬಾಳಿಕೆ ನಡೆಸಿ, ಕೆಲಸ ಮಾಡಿಸುತ್ತಾರೆ. ಅಧಿಕಾರಿಗಳು ಸಂಜೆ 4:30ಕ್ಕೆ ಮನೆಗೆ ಹೋಗುತ್ತಾರೆ. ಆದರೆ, ನಮಗೆ ರಾತ್ರಿ ಪೂರ್ತಿ ಕೆಲಸ ಮಾಡಿ ಎನ್ನುತ್ತಾರೆ.
2018-19 ರಿಂದ ಪೂರ್ಣ ಪ್ರಮಾಣದ ಅನುದಾನ ಬಿಡುಗಡೆ ಮಾಡಿಲ್ಲ. ಬಂದ ಅರ್ಧ ಅನುದಾನದಲ್ಲಿ ಹಂಚಿಕೆ ಮಾಡುವುದು ಹೇಗೆ, ಡಿಸಿ ಅವರ ಪಿಡಿ ಖಾತೆಯ ಹಣ ಬಳಕೆ ಮಾಡಿ ಎಂದು ಹೇಳುತ್ತಿದ್ದರು.
ಈ ಬಗ್ಗೆ ನಾನು ಮೇಲಾಧಿಕಾರಿಗಳಿಗೆ ಅನುದಾನದ ಬಳಕೆ ಹೇಗೆ ಎಂದು ಪತ್ರ ಬರೆದಿದ್ದೆ. ಆದರೆ, ಈ ಬಗ್ಗೆ ಯಾವುದೇ ಉತ್ತರ ಬಂದಿರಲಿಲ್ಲ. ಇದರಿಂದ ಹಣದ ಬಳಕೆ ಹೇಗೆ ಎಂದು ತಿಳಿಯದಾಗಿತ್ತು. ಅಲ್ಲದೆ ಇದರಿಂದ ಕಡತ ಬಾಕಿ ಉಳಿಯುವಂತಾಗಿತ್ತು ಎಂದು ಬರೆದಿದ್ದಾರೆ. ನನಗೆ ಬರಬೇಕಾದ ಹಣವನ್ನು ನನ್ನ ಅಮ್ಮ, ನನ್ನ ಅಕ್ಕ, ನನ್ನ ಅಣ್ಣ, ನನ್ನ ಹೆಂಡತಿ ಹಾಗೂ ನನ್ನ ಮಗಳಿಗೆ ಐದು ಭಾಗವಾಗಿ ಹಂಚಿ ಎಂದು ತಿಳಿಸಿದ್ದಾರೆ.
ಜಯನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿದೆ. ಗಿರಿರಾಜ್ ಅವರು ಇಂದು ಮನೆಯಿಂದ ಹೊರಟು ಬೆಳಗ್ಗೆ 10 ಗಂಟೆಯಲ್ಲಿ ಭದ್ರಾವತಿಯ ಕಾರೆಹಳ್ಳಿ ಬಳಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಇದರಿಂದ ಗಿರಿರಾಜ್ ರನ್ನು ಈ ಭಾಗದ ಕಾಲುವೆಗಳಲ್ಲಿ ಹುಟುಕಾಟ ನಡೆಸಲಾಗುತ್ತಿದೆ. ಗಿರಿರಾಜ್ ಮಿಸ್ಸಿಂಗ್ ನಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ವಿಜಯ ಸಂಘರ್ಷಕ್ಕೆ ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795