ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಮ್ಮನ್ನು ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿ ಕೊಂಡು ಒಂಟಿ ಮಹಿಳೆಯನ್ನು ವಂಚಿಸಿ ಬಂಗಾರದ ಸರ ಎಗರಿಸಿದ್ದ ಆಂಧ್ರಪ್ರದೇಶ ಮೂಲದ ಇಬ್ಬರು ಅಂತರ್ ರಾಜ್ಯ ಖದೀಮರನ್ನು ಪೇಪರ್ ಟೌನ್ ಪೊಲೀಸ್ ಠಾಣೆಯ ತನಿಖಾ ತಂಡ ಬಂಧಿಸಿದೆ.
ಬಂಧಿತ ಆರೋಪಿಗಳನ್ನು ಆಂಧ್ರ ಪ್ರದೇಶ ರಾಜ್ಯದ ವಾಸಿಗಳಾದ ಸೈಯದ್ ಅಬ್ಬಾಸ್ ಅಲಿ ಹಾಗೂ ಹುಸೇನ್ ಭಾಷಾ ಎಂದು ಗುರುತಿಸ ಲಾಗಿದೆ. ಬಂಧಿತರಿಂದ ಒಟ್ಟು 4,35,000 ರೂಪಾಯಿ ಮೌಲ್ಯದ 40 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಲಾಪುರದಲ್ಲಿ ಮಹಿಳೆ ಯೊಬ್ಬರು ಒಂಟಿಯಾಗಿ ರಸ್ತೆಯಲ್ಲಿ ಹೋಗುತ್ತಿದ್ದಾಗ, ಅವರನ್ನು ತಡೆದ ಅಪರಿಚಿತ ಆರೋಪಿಗಳು ತಾವು ‘ಪೋಲಿಸ್ ಅಧಿಕಾರಿಗಳು’ ಎಂದು ಸುಳ್ಳು ಪರಿಚಯ ನೀಡಿದ್ದರು. ಬಳಿಕ ಮಹಿಳೆಯನ್ನು ನಂಬಿಸಿ, ಮೋಸದಿಂದ ಅವರ ಬಳಿಯಿದ್ದ ಬಂಗಾರದ ಸರವನ್ನು ಪಡೆದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದರು. ಈ ಕುರಿತು ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಎ.ಜಿ ರವರ ಮಾರ್ಗ ದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಉಪವಿಭಾಗದ ಡಿವೈಎಸ್ಪಿ ಪ್ರಕಾಶ್ ರಾಠೋಡ್ ಅವರ ಮೇಲ್ವಿಚಾರಣೆ ಯಲ್ಲಿ ಗ್ರಾಮಾಂತರ ಪಿಐ ಹಾಗೂ ಪೇಪರ್ ಟೌನ್ ಪಿಎಸ್‌ಐ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ, ಅಂತರ್ ರಾಜ್ಯ ಕಳ್ಳರನ್ನು ಬಂಧಿಸು ವಲ್ಲಿ ಯಶಸ್ವಿಯಾಗಿದೆ.