ವಿಜಯ ಸಂಘರ್ಷ
ಭದ್ರಾವತಿ: ಶಿಕ್ಷಕ ವೃತ್ತಿಯೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಅನಿತಾ ಮೇರಿ ಸೇರಿದಂತೆ ತಾಲೂಕಿನ 4 ಶಿಕ್ಷಕರಿಗೆ ಜಿಲ್ಲಾಮಟ್ಟದ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಕೋವಿಡ್-19 ರ ಹಿನ್ನಲೆಯಲ್ಲಿ ಕಳೆದ 2 ವರ್ಷಗಳಿಂದ ಶಿಕ್ಷಕರ ದಿನಾಚರಣೆ ಸರಳವಾಗಿ ಆಚರಿಸಲಾಗುತ್ತಿದ್ದು, ಈ ನಡುವೆ ಸಾಧಕ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಎಲೆಮರೆ ಕಾಯಿಯಂತೆ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಾದ ಅನಿತಾಮೇರಿ, ಆರ್. ಬಸವರಾಜ್, ವಿರೂಪಾಕ್ಷಪ್ಪ ಹಿರೇಮಠ್ ಮತ್ತು ಸುಶೀಲಾ ಮಾರ್ಗರೇಟ್ ಅವರಿಗೆ ಪ್ರಶಸ್ತಿ ಲಭಿಸಿರುವುದು ಶಿಕ್ಷಕರ ವರ್ಗಕ್ಕೆ ಸಂತಸವನ್ನುಂಟು ಮಾಡಿದೆ.
ಅನಿತಾ ಮೇರಿ:
ಅನಿತಾ ಮೇರಿ ಅವರು 1998ರಲ್ಲಿ ದೈಹಿಕ ಶಿಕ್ಷಕಿಯಾಗಿ ನೇಮಕಗೊಂಡು ತೀರ್ಥಹಳ್ಳಿ ತಾಲೂಕಿನಲ್ಲಿ ಕರ್ತವ್ಯ ಆರಂಭಿಸಿದ್ದು, ನಂತರ ತಾಲೂಕಿನ ತಡಸ ಸರ್ಕಾರಿ ಉರ್ದು ಶಾಲೆ, ಭದ್ರಾ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ 2 ವರ್ಷ ದೊಣಬಘಟ್ಟ ಸರ್ಕಾರಿ ಕನ್ನಡ ಶಾಲೆಯಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಹುಣಸೇಕಟ್ಟೆ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸರ್ಕಾರಿ ಕೆಲಸಕ್ಕೆ ಸೇರುವ ಮೊದಲು 1987 ರಿಂದಲೇ ವಿವಿಧೆಡೆ ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಇವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಶಿಕ್ಷಣ ಇಲಾಖೆ ವತಿಯಿಂದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಜಿಲ್ಲಾಮಟ್ಟದ ಪ್ರಶಸ್ತಿಗೆ ಅನಿತಾ ಮೇರಿ ಭಾಜನರಾಗಿದ್ದಾರೆ.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795