ವಿಜಯ ಸಂಘರ್ಷ
ಶಿವಮೊಗ್ಗ: ಶರಾವತಿ, ಚಕ್ರ ಹಾಗು ಸಾವೆಹಕ್ಲು ಮುಳುಗಡೆ ಪ್ರದೇಶದ ನಿರಾಶ್ರಿತರಿಗೆ ಭೂಮಿ ಹಾಗೂ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಮೂರು ದಿನಗಳ ಪಾದಯಾತ್ರೆ ಇಂದು ಪ್ರಾರಂಭವಾಗಿದೆ. ತೀರ್ಥಹಳ್ಳಿ ತಾಲೂಕಿನ ಕಲ್ಲುಕೊಪ್ಪ ಗ್ರಾಮದಿಂದ ಪಟ್ಟಣದವರೆಗೂ ಈ ಪಾದಯಾತ್ರೆ ನಡೆಯಲಿದೆ.
ಇಂದಿನಿಂದ 45 ಕಿಮೀ ದೂರದ ಪಾದಯಾತ್ರೆ ನಡೆಯಲಿದ್ದು, ಕಲ್ಲುಕೊಪ್ಪ ಗ್ರಾಮದಿಂದ ಪ್ರಾರಂಭವಾಗಿ ಕನ್ನಂಗಿ ಗ್ರಾಮದವರೆಗೂ ನಡೆಯಲಿದೆ. ನಾಳೆ (ಸೋಮವಾರ) ಕನ್ನಂಗಿಯಿಂದ ಕುಡುಮಲ್ಲಿಗೆವರೆಗೆ, ಮಂಗಳವಾರ ಕುಡುಮಲ್ಲಿಗೆಯಿಂದ ತೀರ್ಥಹಳ್ಳಿ ಪಟ್ಟಣದವರೆಗೆ ಪಾದಯಾತ್ರೆ ನಿಗದಿಯಾಗಿದೆ.
ಕಲ್ಲುಕೊಪ್ಪದಿಂದ ಪ್ರಾರಂಭವಾದ ಪಾದಯಾತ್ರೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ದೀಪ ಬೆಳಗಿ ಚಾಲನೆ ನೀಡಿ, ಪಾದಯಾತ್ರೆಯಲ್ಲಿ ಭಾಗಿಯಾದರು. ಬಳಿಕ ಮಾತನಾಡಿದ ಅವರು 'ಶರಾವತಿ ಅಣೆಕಟ್ಟೆಗಾಗಿ ಎರಡು ಭಾರಿ ಭೂಮಿ ಹಾಗೂ ವಸತಿಯನ್ನು ಈ ಭಾಗದ ಜನ ಕಳೆದುಕೊಂಡಿದ್ದಾರೆ. ನಾಡಿಗೆ ಬೆಳಕು ನೀಡುವ ಸಲುವಾಗಿ ಪ್ರಾರಂಭವಾದ ಲಿಂಗನಮಕ್ಕಿ ಯೋಜನೆಯಿಂದ ಈ ಭಾಗದ ಜನ ಕತ್ತಲಲ್ಲಿ ಇರುವಂತಾಗಿದೆ. ಹಾಗಾಗಿ ಸರ್ಕಾರ ಇವರಿಗೆ ಹಾಲಿ ಇರುವ ಕಡೆಯೇ ಭೂಮಿ ಹಾಗೂ ಅದರ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಪಾದಯಾತ್ರೆಯಲ್ಲಿ ಮುಖಂಡರಾದ ಆರ್.ಎಂ.ಮಂಜುನಾಥ್ ಗೌಡ, ಶ್ರೀಕಾಂತ್, ಸುಂದರೇಶ್, ವಕೀಲ ಶ್ರೀಪಾಲ್, ತೀ.ನಾ.ಶ್ರೀನಿವಾಸ್, ಜಯಂತ್ ಮತ್ತಿತರರು ಭಾಗಿಯಾಗಿದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795