ಸಚಿವರನ್ನು ಸಂಪುಟದಿಂದ ಕೈ ಬಿಡಿ: ಮೀಸಲಾತಿ ಸಂರಕ್ಷಣಾ ಒಕ್ಕೂಟ ಆಗ್ರಹ

 

ವಿಜಯ ಸಂಘರ್ಷ



ಭದ್ರಾವತಿ: ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ಯಾವುದೇ ಕಾರಣಕ್ಕೂ ಏಕಪಕ್ಷೀಯ ವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದೆಂದು ಮೀಸಲಾತಿ ಸಂರಕ್ಷಣಾ ಒಕ್ಕೂಟದ ಮುಖಂಡರು ಆಗ್ರಹಿಸಿದರು.

ಚಿತ್ರದುರ್ಗ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಯವರ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಚೇರಿವರೆಗೂ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖಂಡರು, ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದನ್ನು ವಿರೋಧಿಸಿ ಹಾಗು ವರದಿಯನ್ನು ಸಾರ್ವಜನಿಕ ಚರ್ಚೆಗಾಗಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಸದಾಶಿವ ಆಯೋಗದ ವರದಿ ಕುರಿತಂತೆ ನಡೆಯುತ್ತಿರುವ ಹೋರಾಟ ನೆನ್ನೆ ಮೊನ್ನೆಯದಲ್ಲ. ಕಳೆದ 15 ವರ್ಷಗಳಿಂದಲೂ ನಿರಂತರವಾಗಿ ನಡೆಯುತ್ತಿದೆ. ಈ ವರದಿ ಭೋವಿ. ಬಂಜಾರ, ಕೊರಚ, ಕೊರಮ, ಅಲೆಮಾರಿ, ಸುಡುಗಾಡು ಸಿದ್ದ ಸೇರಿದಂತೆ ಇನ್ನಿತರೆ ಸಮುದಾಯಗಳಿಗೆ ಮಾರಕವಾಗಿದೆ ಎಂದು ಆರೋಪಿಸಿದರು.

ದಲಿತ, ಹಿಂದುಳಿದ ಸಮುದಾಯಗಳಿಗೆ ನೀಡಲಾಗುತ್ತಿರುವ ಮೀಸಲಾತಿಯ ಮಿತಿಯನ್ನು ಶೇ. 50 ರಿಂದ 70 ಕ್ಕೆ ಹೆಚ್ಚಿಸಬೇಕು. ಮೀಸಲಾತಿಯನ್ನು ಮೂಲಭೂತ ಹಕ್ಕಿನಡಿಯಲ್ಲಿ ಸೇರಿಸಬೇಕು. ಹೋರಾಟಗಳ ಹೆಸರಿನಲ್ಲಿ ಬಂಜಾರ ಕುಲಗುರು ಶ್ರೀ ಸಂತ ಸೇವಾಲಾಲ್ ಮತ್ತು ಸಚಿವ ಪ್ರಭುಚೌಹಾಣ್ ಅವರನ್ನು ಅವಹೇಳನ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿಗಳ ಸಹೋದರ ಸಮುದಾಯಗಳ ಮಧ್ಯೆ ದ್ವೇಷ, ಪ್ರಚೋದನೆ ಬಿತ್ತಲು ಹೊರಟಿರುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹಾಗೂ ರಾಜ್ಯ ಸಚಿವ ಗೋವಿಂದ ಕಾರಜೋಳ ಅವರುಗಳನ್ನು ಸಚಿವ ಸಂಪುಟದಿಂದ ಕೈ ಬಿಡಬೇಕೆಂದು ಆಗ್ರಹಿಸಿದರು.

ಒಕ್ಕೂಟದ ಮುಖಂಡರಾದ ರಾಜಾನಾಯ್ಕ, ಪ್ರೇಮ್‌ಕುಮಾರ್, ವೀರಭದ್ರಪ್ಪ ಪೂಜಾರ್, ರವಿ, ಟಿ.ಎಂ ಮಂಜುನಾಥ್, ನವೀನ್‌ಕುಮಾರ್, ಹನುಮಂತನಾಯ್ಕ, ಟಿ. ರಂಗನಾಥ್,  ತಮ್ಮಯ್ಯ, ಸೋಮೇಶ್‌ನಾಯ್ಕ, ಧನಿಕನಾಯ್ಕ, ನಾಗೇಶ್, ಮಂಜು ನಾಥ್, ಪ್ರವೀಣ್‌ನಾಯ್ಕ, ಅಣ್ಣಪ್ಪ, ಜುಂಜಾನಾಯ್ಕ,ಧೀರರಾಜ್ ಹೊನ್ನ  ವಿಲೆ, ಕೃಷ್ಣನಾಯ್ಕ, ಬಿ.ಎನ್ ನಿದೀಶ್, ಜಿ. ಆನಂದಕುಮಾರ್, ಬಿ.ಟಿ ನಾಗರಾಜ್, ಚೌಡಪ್ಪ, ಹಾಜ್ಯನಾಯ್ಕ, ರವಿನಾಯ್ಕ, ಅಣ್ಣಾಮಲೈ, ಗಿರೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವಿಜಯ ಸಂಘರ್ಷಕ್ಕೆ ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು