ವಿಜಯ ಸಂಘರ್ಷ
ಭದ್ರಾವತಿ: ಕಳೆದ ಎರಡೂವರೆ ವರ್ಷಗಳ ನಂತರ ನಗರಸಭೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ನಾಳೆ ನಡೆದು ಜನಪ್ರತಿನಿಧಿಗಳ ಆಡಳಿತ ಅಸ್ತಿತ್ವಕ್ಕೆ ಬರುಲಿದ್ದು, 18 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಬಹುತೇಕ ಖಚಿತವಾಗಿದೆ.
ಒಟ್ಟು 35 ಸ್ಥಾನಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆಯಲಿದೆ. ಕಾಂಗ್ರೆಸ್ -18, ಜೆಡಿಎಸ್-12, ಬಿಜೆಪಿ-4 ಹಾಗು 1-ಪಕ್ಷೇತರ ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದ್ದು, ಉಪಾಧ್ಯಕ್ಷ ಸ್ಥಾನ ಪರಿಷಿಷ್ಟ ಜಾತಿಗೆ ಮೀಸಲಾತಿ ಹೊಂದಿದೆ.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಒಟ್ಟು 4 ಮಹಿಳೆಯರು ಪೈಪೋಟಿಗೆ ಮುಂದಾಗಿದ್ದು, ವಾರ್ಡ್ ನಂ.2 ರ ಗೀತಾ ರಾಜ್‌ಕುಮಾರ್, ವಾರ್ಡ್ ನಂ.13 ರ ಅನುಸುಧಾ ಮೋಹನ್, ವಾರ್ಡ್ ನಂ.34ರ ಲತಾ ಚಂದ್ರ ಶೇಖರ್ ಮತ್ತು ವಾರ್ಡ್ ನಂ.35 ರ ಶೃತಿ ವಸಂತಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಾಗಿದ್ದು, ಈ ನಾಲ್ವರು ಮೊದಲ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ ಮೊದಲು ಯಾರಿಗೆ ಅವಕಾಶ ನೀಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಒಟ್ಟು 3 ಮಂದಿ ಅರ್ಹರಿದ್ದು, ಈ ಪೈಕಿ ವಾರ್ಡ್ ನಂ.9 ರ ಚನ್ನಪ್ಪ ಉಪಾಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಉಳಿದಂತೆ ವಾರ್ಡ್ ನಂ.26 ರ ಸದಸ್ಯೆ ಸರ್ವಮಂಗಳ ಭೈರಪ್ಪ ಸಹ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸ ಬಹುದಾಗಿದೆ. ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಾಗಿರುವ ಹಿನ್ನಲೆಯಲ್ಲಿ ಉಪಾಧ್ಯಕ್ಷ ಸ್ಥಾನ ಪುರುಷರಿಗೆ ಬಿಟ್ಟುಕೊಡುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿರುವ ಸರ್ವಮಂಗಳ ಭೈರಪ್ಪ ಅವರ ಸ್ಪರ್ಧೆಗೆ ಅವಕಾಶ ಸಿಗದಿರಬಹುದು ಎನ್ನಲಾಗಿದೆ.
ಬೆಳಿಗ್ಗೆ 10 ಗಂಟೆಯಿಂದ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆ ನಂತರ ನಾಮಪತ್ರಗಳ ಪರಿಶೀಲನೆ ನಡೆದು ಮಧ್ಯಾಹ್ನ 1 ಗಂಟೆಗೆ ಸಭೆ ನಡೆಯಲಿದ್ದು, ಅಗತ್ಯವಿದ್ದಲ್ಲಿ ಚುನಾವಣೆ ನಡೆಯಲಿದೆ.
ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795