ವಿಜಯ ಸಂಘರ್ಷ
ಭದ್ರಾವತಿ : ಲಕ್ಷಾಂತರ ಜನರಿಗೆ ಅನ್ನ ನೀರು, ನೆರಳು ಕೊಟ್ಟು ಸಾಕಿ ಸಲುಹಿದ ನಗರದ ಮೈಸೂರು ಕಾಗದ ಕಾರ್ಖಾನೆ ಇದೀಗ ಇತಿಹಾಸದ ಗರ್ಭದೊಳಗೆ ಮುಚ್ಚಿ ಹೋಗಿದೆ. ಪುನಃ ಆರಂಭಗೊಳ್ಳುವ ನಿರೀಕ್ಷೆ ಹುಸಿಯಾಗಿದೆ. ಇಲ್ಲಿಯವರೆಗೂ ನಡೆಸಿಕೊಂಡು ಬಂದ ಹೋರಾಟ ಗಳಿಗೆ ಬೆಲೆ ಇಲ್ಲದಂತಾಗಿದೆ.
10 ಜೂನ್ 2019 ರಂದು ಕಾರ್ಖಾನೆ ಆಡಳಿತ ಮಂಡಳಿ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಅಂತಿಮ ಆದೇಶವನ್ನು ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಜಿ. ಕಲ್ಪನಾ 7 ಅಕ್ಟೋಬರ್ 2021 ರಂದು ಹೊರಡಿಸಿದ್ದಾರೆ.
ಕಾರ್ಖಾನೆಯ ಆಡಳಿತ ಮಂಡಳಿ ಹಾಗು ಎದುರುದಾರರಾದ ದಿ ಮೈಸೂರು ಪೇಪರ್ ಮಿಲ್ಸ್ ಎಂಪ್ಲಾಯೀಸ್ ಅಸೋಸಿಯೇಷನ್ ಮತ್ತು ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘ ಇವುಗಳು ಸಲ್ಲಿಸಿದ್ದ ಅರ್ಜಿಗಳನ್ನು ರಾಜ್ಯ ಉಚ್ಛನ್ಯಾಯಾಲಯದ ತೀರ್ಪಿನ ಆದೇಶದಂತೆ ಸುಧೀರ್ಘವಾಗಿ ವಿಚಾರಣೆ ನಡೆಸಿ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಅಂತಿಮ ಆದೇಶ ಹೊರಡಿಸಿದ್ದಾರೆ.
ಸುಮಾರು 13 ಪುಟಗಳನ್ನು ಒಳಗೊಂಡಿರುವ ಆದೇಶ ಪ್ರತಿಯಲ್ಲಿ ಆಡಳಿತ ಮಂಡಳಿ ಕಾರ್ಖಾನೆಯನ್ನು ಮುಚ್ಚಲು ನೀಡಿರುವ ಸಕಾರಣ ಗಳನ್ನು ಹಾಗು ಇದಕ್ಕೆ ಪ್ರತಿಯಾಗಿ ಎರಡು ಕಾರ್ಮಿಕ ಸಂಘಟನೆಗಳ ಆಕ್ಷೇಪಣೆಗಳನ್ನು ಸ್ವವಿವರವಾಗಿ ತಿಳಿಸಲಾಗಿದೆ.
ಒಂದು ಕಾಲದಲ್ಲಿ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ, ತನ್ನದೇ ಆದ ಬೈಸನ್ ಬ್ರಾಂಡ್‌ನೊಂದಿಗೆ ದೇಶೀಯ ಹಾಗು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದ್ದ ಅದರಲ್ಲೂ ಜಿಲ್ಲೆಯ ಪ್ರತಿಷ್ಠಿತ ಬೃಹತ್ ಕಾರ್ಖಾನೆಯೊಂದು ಇದೀಗ ಇತಿಹಾಸದ ಗರ್ಭದೊಳಗೆ ಮುಚ್ಚಿ ಹೋಗುತ್ತಿರುವುದು ದುರಂತದ ಸಂಗತಿಯಾಗಿದೆ.
ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಮತ್ತು ಭಾರತರತ್ನ ಸರ್. ಎಂ. ವಿಶ್ವೇಶ್ವರಾಯ ಅವರ ಪರಿಶ್ರಮದ ಫಲವಾಗಿ ಆರಂಭಗೊಂಡ ಕಾರ್ಖಾನೆಯನ್ನು ಕೊನೆಗೂ ಉಳಿಸಿಕೊಳ್ಳಲಾಗದಿರು ವುದು ಕ್ಷೇತ್ರದ ಕಾರ್ಮಿಕರು, ರೈತರು, ವ್ಯಾಪಾರಸ್ಥರು ಸೇರಿದಂತೆ ಸಮಸ್ತ ನಾಗರೀಕರಲ್ಲಿ ನೋವುಂಟು ಮಾಡಿದೆ.
ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795