ವಿಜಯ ಸಂಘರ್ಷ
ಶಿವಮೊಗ್ಗ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇಂದು ಕನ್ನಡದ ವಿಶೇಷ ಮೂರು ಗೀತೆಗಳನ್ನು ಹಾಡಿದ್ದು, ಇತಿಹಾಸ ಸೃಷ್ಟಿಸಿದ ದಿನವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್ ಈಶ್ವರಪ್ಪ ಅವರು ತಿಳಿಸಿದ್ದಾರೆ.
ಇಂದು ನಗರದಲ್ಲಿ ನಡೆದ ಲಕ್ಷ ಕಂಠಗಳಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮದ ನಿಮಿತ್ತ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಾಮೂಹಿಕ ಗಾಯನ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ರಾಜ್ಯದ ಇತಿಹಾಸದಲ್ಲಿ ಈ ದಿನವನ್ನು ನೆನಪಿಟ್ಟುಕೊಳ್ಳಬೇಕು. ಈ ಯಶಸ್ವಿ ಕಾರ್ಯಕ್ರಮಕ್ಕೆ ಕಾರಣರಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ 5 ಲಕ್ಷ ಜನರು ಏಕ ಕಾಲದಲ್ಲಿ ಕನ್ನಡದ ವಿಶೇಷ ಗೀತೆಯನ್ನು ಸಾಮೂಹಿಕ ವಾಗಿ ಹಾಡಿರುವುದು ಇತಿಹಾಸ ಸೃಷ್ಟಿಸಿದ ದಿನವಾಗಿದೆ ಎಂದರು.
ಬರುವಂತಹ ಎಲ್ಲ ದಿನವನ್ನು ಕನ್ನಡ ಅಭಿವೃದ್ದಿಗೆ ಶ್ರಮ ಹಾಕೋಣ. ಅದರ ಮೂಲಕ ಕರ್ನಾಟಕವನ್ನು ಎಲ್ಲ ಕ್ಷೇತ್ರದಲ್ಲೂ ಮೊದಲನೆ ಸ್ಥಾನಕ್ಕೆ ತೆಗೆದುಕೊಂಡು ಹೋಗೋಣ. ಇಂದು ಹಾಡಿದಂತೆ ಒಟ್ಟಾಗಿ ಇರೋಣ ಎಂದು ಶುಭ ಹಾರೈಸಿದರು.ಈ ವೇಳೆ, ಕನ್ನಡ ನಾಡು ನುಡಿಯ ಪ್ರತಿಜ್ಞಾವಿಧಿ ಸಂಕಲ್ಪ ಸ್ವೀಕರಿಸಲಾಯಿತು.
ಲಕ್ಷ ಕಂಠಗಳ ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯ ಕೂಡ ಕೈಜೋಡಿಸಿತು. ಜ್ಞಾನ ಸಹ್ಯಾದ್ರಿಯ ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.
ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಅಧ್ಯಾಪಕೇತರ ಸಿಬ್ಬಂದಿ ಸಾಮೂಹಿಕ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕುವೆಂಪು ವಿರಚಿತ 'ಬಾರಿಸು ಕನ್ನಡ ಡಿಂಡಿಮ,' ಕೆ. ಎಸ್ ನಿಸಾರ್ ಅಹಮದ್ ರಚನೆಯ 'ನಿತ್ಯೋತ್ಸವ,' ಮತ್ತು ಹಂಸಲೇಖ ಅವರ ರಚನೆಯ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡುಗಳಿಗೆ ಧ್ವನಿಗೂಡಿಸಿದರು.
ಕುಲಪತಿ ಪ್ರೊ. ಬಿ. ಪಿ ವೀರಭದ್ರಪ್ಪ ಈ ಸಂದರ್ಭದಲ್ಲಿ ಮಾತನಾಡಿ. ಕರ್ನಾಟಕದ ಜನತೆಯಲ್ಲಿ ಕನ್ನಡ ನಾಡು-ನುಡಿ ಬಗ್ಗೆ ಪ್ರೀತಿ, ಅಭಿಮಾನ ಮೂಡಿಸಲು ಈ ರೀತಿಯ ಕಾರ್ಯಕ್ರಮಗಳು ಅತ್ಯವಶ್ಯಕ. ವಿಶ್ವದಾದ್ಯಂತ 50 ಲಕ್ಷ ಜನರು ಸರ್ಕಾರ ಸೂಚಿಸಿರುವ ಮೂರು ಗೀತೆಗಳನ್ನು ಹಾಡುತ್ತಿದ್ದಾರೆ. ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿನೂತನವಾದ ಪರಿಕಲ್ಪನೆ ಇದಾಗಿದೆ. ಕನ್ನಡಿಗರ ಆತ್ಮ ಗೌರವ ಹೆಚ್ಚಿಸಿಕೊಳ್ಳು ವುದರ ಜೊತೆಗೆ ಇತರ ಭಾಷಿಗರಿಗೂ ಕನ್ನಡ ಕಲಿಸಲು ಈ ಕಾರ್ಯಕ್ರಮ ಸ್ಫೂರ್ತಿಯಾಗಲಿ ಎಂದರು.
ಕುಲಪತಿ ಪ್ರೊ. ಬಿ. ಪಿ ವೀರಭದ್ರಪ್ಪ, ಕುಲಸಚಿವೆ ಜಿ. ಅನುರಾಧ, ಪರೀಕ್ಷಾಂಗ ಕುಲಸಚಿವ ಪ್ರೊ. ಸಿ. ಎಂ ತ್ಯಾಗರಾಜ, ಕನ್ನಡ ಭಾರತಿ ನಿರ್ದೇಶಕ ಡಾ. ಜಿ. ಪ್ರಶಾಂತ ನಾಯಕ್, ಕಲಾ ನಿಕಾಯದ ಡೀನ್ ಪ್ರೊ. ಜಯರಾಂ ಭಟ್ ಮತ್ತಿತರರು ಭಾಗವಹಿಸಿ ಗೀತೆಗಳಿಗೆ ಧ್ವನಿಗೂಡಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಎಂ. ಆರ್ ಸತ್ಯಪ್ರಕಾಶ್ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795