ಭದ್ರಾವತಿಯಲ್ಲಿ ಕನ್ನಡದ ಕಂಪು ಸಾರಿದ ಸಮೂಹ ಗೀತಾ ಗಾಯನ

 

ವಿಜಯ ಸಂಘರ್ಷ



ಭದ್ರಾವತಿ: ಸರಳ, ಸುಂದರ ಕನ್ನಡ ಭಾಷೆ  ವಿಶ್ವಮಟ್ಟದಲ್ಲಿ ವಿಜೃಂಭಿಸು ವಂತಾಗಲು ಪ್ರತಿಯೊಬ್ಬರೂ ಕನ್ನಡಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ನಾಡು ಕಟ್ಟುವ ಕಾರ್ಯದಲ್ಲಿ ಮುನ್ನಡೆ ಯೋಣ ಎಂದು ತಹಸೀಲ್ದಾರ್ ಆರ್. ಪ್ರದೀಪ್ ಹೇಳಿದರು.

ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ ದಲ್ಲಿಂದು ವಿಶ್ವದಾದ್ಯಂತ ಏಕ ಕಾಲ ದಲ್ಲಿ ಲಕ್ಷ ಲಕ್ಷ ಕಂಠಗಳಲ್ಲಿ ಕನ್ನಡ ಗೀತ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡ ಭಾಷೆಗೆ ತನ್ನದೇ ಆದ ಭವ್ಯ ಪರಂಪರೆ ಇದೆ. ಆನೇಕ ಮಹಾನ್ ವ್ಯಕ್ತಿಗಳ ಪರಿಶ್ರಮದಿಂದ ಕನ್ನಡ ನಾಡು ಉದಯಿಸಿದೆ. ಅನೇಕ ಕವಿಗಳು, ಸಾಹಿತಿಗಳು ಕನ್ನಡ ಭಾಷೆಗೆ ವಿಶಿಷ್ಟವಾದ ಕೊಡುಗೆಗಳನ್ನು ನೀಡಿದ್ದಾರೆ. ಸಮೃದ್ಧವಾದ ಭಾಷೆ ಕನ್ನಡವಾಗಿದ್ದು, ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ದೇಶದಲ್ಲಿ ಭಾಷಾವಾರು ಪ್ರಾಂತ್ಯಗಳು ಉದಯವಾದ ನಂತರ ಕನ್ನಡ ನಾಡಿಗೆ 1973 ರಲ್ಲಿ ಕರ್ನಾಟಕ ಎಂಬ ಹೆಸರನ್ನು ನಾಮಕರಣ ಗೊಳಿಸ ಲಾಯಿತು. ಅಂದಿನಿಂದ ನವಂಬರ್ 1 ರಂದು ಪ್ರತಿ ವರ್ಷ ರಾಜ್ಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ರಾಜ್ಯೋತ್ಸವ ಸಂದರ್ಭದಲ್ಲಿ ವಿಶಿಷ್ಟ ಕಾರ್ಯಕ್ರಮ ಗಳನ್ನು ಆಯೋಜಿಸುವ ಮೂಲಕ ನಾಡು, ನುಡಿ, ಸಂಸ್ಕೃತಿ ಯನ್ನು ಬಿಂಬಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ 'ಮಾತಾಡ್ ಮಾತಾಡ್ ಕನ್ನಡ, ಕನ್ನಡಕ್ಕಾಗಿ ನಾವು' ಅಭಿಯಾನ ಅತಿ ಮಹತ್ವದ ಕಾರ್ಯಕ್ರಮವಾಗಿದೆ ಎಂದರು.

ಮೊದಲಿಗೆ ನಾಡಗೀತೆ ಗಾಯನ, ನಂತರ ನಿತ್ಯೋತ್ಸವ, ಬಾರಿಸು ಕನ್ನಡ ಡಿಂಡಿಮವ ಸೇರಿದಂತೆ ಇನ್ನಿತರ ಕನ್ನಡ ಗೀತೆಗಳ ಗಾಯನ ನಡೆಯಿತು. ನಾಡು, ಭಾಷೆ ಉಳಿಸಿಬೆಳೆಸುವ ನಿಟ್ಟಿನಲ್ಲಿ ಸಂಕಲ್ಪ ಸ್ವೀಕರಿಸಲಾಯಿತು.

ನಗರಸಭಾಧ್ಯಕ್ಷೆ ಗೀತಾ ರಾಜ್‌ ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಕೆ. ಪರಮೇಶ್, ತಾಪಂ ಇಒ ರಮೇಶ್, ಬಿಇ ಓ ಟಿ.ಎನ್ ಸೋಮಶೇಖರಯ್ಯ, ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಅಪೇಕ್ಷ ಮಂಜುನಾಥ್, ನಗರಸಭೆ ಸದಸ್ಯರು, ತಾಲೂಕು ಆಡಳಿತ, ನಗರಸಭೆ ಹಾಗು ತಾಲೂಕು ಪಂಚಾಯಿತಿ ಸಿಬ್ಬಂದಿಗಳು, ವಿವಿಧ ಕಲಾ ತಂಡಗಳ ಕಲಾವಿದರು, ಶಾಲಾ ಮಕ್ಕಳು ಪಾಲ್ಗೊಂಡಿದ್ದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು