ವಿಜಯ ಸಂಘರ್ಷ
"ಸಭೆಯಲ್ಲಿ ಅತಿ ಹಿಂದುಳಿದ ವರ್ಗಗಳಿಗೆ ಸೇರಿದ ಐಎಎಸ್ ಮತ್ತು ಕೆಎಎಸ್ ಜೊತೆಗೆ ಪ್ರಮುಖ ಅಧಿಕಾರಿಗಳು - ನೌಕರರು ಭಾಗಿ"
ಬೆಂಗಳೂರು: ರಾಜ್ಯದಲ್ಲಿ ಆರ್ಥಿಕ ವಾಗಿ ಹಾಗೂ ರಾಜಕೀಯವಾಗಿ ಮುಂದುವರೆದಿರುವ ಜಾತಿಗಳು ರಾಜ್ಯ ಸರಕಾರದ ಮೇಲೆ 2 ಎ ಪ್ರವರ್ಗಕ್ಕೆ ಸೇರಿಸುವಂತೆ ಅತಿಯಾದ ಒತ್ತಡವನ್ನು ಹೇರುತ್ತಿವೆ. ಇಂತಹ ಒತ್ತಡದ ವಿರುದ್ದ ಸಂಘಟಿತವಾದ ಹೋರಾಟ ಮಾಡಬೇಕಾಗಿದೆ. ಇಲ್ಲದಿದ್ದಲ್ಲಿ ನಮ್ಮ ಮುಂದಿನ ಪೀಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಸಂಧರ್ಭ ಉಂಟಾಗಲಿದೆ ಎಂದು ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್ ವಿಷಾಧ ವ್ಯಕ್ತಪಡಿಸಿದರು.
ಇಂದು ಕುಮಾರ ಕೃಪಾ ಅತಿಥಿ ಗೃಹದಲ್ಲಿ ರಾಜ್ಯದ ನಿವೃತ್ತ ಹಾಗೂ ಹಾಲಿ ಐಎಎಸ್, ಕೆಎಎಸ್ ಹಾಗೂ ಹಿರಿಯ ಅಧಿಕಾರಿಗಳ ಸಭೆಯನ್ನ ಉದ್ದೇಶಿಸಿ ಮಾತನಾಡಿದರು.
ಪಂಚಮಸಾಲಿ ಸಮುದಾಯದಂತಹ ಮುಂದುವರೆದ ಜಾತಿಗಳ ಸ್ವಾಮೀಜಿ ಗಳು ತಮ್ಮ ಸಮುದಾಯವನ್ನು 2 ಎ ವರ್ಗಕ್ಕೆ ಸೇರಿಸುವಂತೆ ಇನ್ನಿಲ್ಲದ ಒತ್ತಡವನ್ನು ಸರಕಾರದ ಮೇಲೆ ಹೇರುತ್ತಿವೆ. ಅಲ್ಲದೆ, ರಾಜ್ಯದಲ್ಲಿ ಮುಂದುವರೆದ ಜಾತಿಗಳು ಅತಿ ಹಿಂದುಳಿದ ಸಮುದಾಯಕ್ಕೆ ಸೇರಿದ ಸಂವಿಧಾನಾತ್ಮಕ ಅಧಿಕಾರವನ್ನು ಕಸಿಯುವ ಪ್ರಯತ್ನದಲ್ಲಿ ತೊಡಗಿಕೊಂಡಿವೆ. ಇಂತಹ ಪ್ರಯತ್ನಗಳ ವಿರುದ್ದ ರಾಜ್ಯಾದ್ಯಂತ ಸಂಘಟಿತ ಹೋರಾಟದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ನಾವುಗಳು ಹಿಂದುಳಿದ ಸಮುದಾಯ ದ ಸ್ವಾಮೀಜಿಗಳ ಸಭೆಯನ್ನು ನಡೆಸಿದ್ದೇವೆ. ಇಂದು ರಾಜ್ಯದ ಅತಿ ಹಿಂದುಳಿದ ವರ್ಗಗಳ ಸಮುದಾಯದ ನಿವೃತ್ತ ಮತ್ತು ಹಾಲಿ ಹಿರಿಯ ಅಧಿಕಾರಿಗಳು ಮತ್ತು ನೌಕರರ ಸಭೆಯನ್ನು ನಡೆಸಿದ್ದೇವೆ. ಈ ವೇದಿಕೆ ಯ ಅಡಿಯಲ್ಲಿ ಸಂಘಟಿತವಾದಂತಹ ಹೋರಾಟ ಮಾಡದೇ ಇದ್ದ ಪಕ್ಷದಲ್ಲಿ ಮುಂದಿನ ಪೀಳಿಗೆ ಆತ್ಮಹತ್ಯೆ ಮಾಡಿ ಕೊಳ್ಳುವ ಪರಿಸ್ಥಿತಿ ಎದುರಾಗಲಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಅತಿ ಹಿಂದುಳಿದ ಸಮುದಾಯಕ್ಕೆ ಸೇರಿದಂತಹ ಸ್ವಾಮೀಜಿಗಳು ಹಾಗೂ ನಿವೃತ್ತ ಹಿರಿಯ ಅಧಿಕಾರಿಗಳನ್ನೊಳ ಗೊಂಡಂತೆ ರಾಜ್ಯ ಮಟ್ಟದ ಕಾರ್ಯಾ ಗಾರವನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ ಸಿ ಎಸ್ ದ್ವಾರಕಾನಾಥ್ ಮಾತನಾಡಿ, 2 ಎ ಪ್ರವರ್ಗದಲ್ಲಿ ಕುಶಲಕರ್ಮಿಗಳ ಸಮುದಾಯಗಳಿಗೆ ಮೀಸಲಾತಿ ನೀಡಲಾಗಿದೆ. ಮೀಸಲಾತಿಯ ವರ್ಗದಲ್ಲಿ ರಾಜಕೀಯ ಹಾಗೂ ಆರ್ಥಿಕವಾಗಿ ಮುಂದುವರೆದ ಜಾತಿಗಳನ್ನು ಸೇರಿಸುವುದು ಸರಿಯಲ್ಲ. ಸದರಿ ಸಮುದಾಯದ ಸ್ವಾಮೀಜಿಗಳು ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡು ಗಡುವು ನೀಡುವ ಮಟ್ಟಕ್ಕೂ ಮುಂದುವರೆದಿದ್ದಾರೆ. ರಾಜ್ಯ ಮಟ್ಟದಲ್ಲಿ ಬಲಿಷ್ಠ ಸಮುದಾಯದ ಒತ್ತಡ ಒಂದು ಕಡೆ ಆದರೆ, ಇನ್ನೊಂದೆಡೆ, ರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಶೇಕಡಾ 10 ರಷ್ಟು ಮೀಸಲಾತಿ ನೀಡುವ ಅಸಂವಿಧಾನಿಕ ಕ್ರಿಯೆ ಆರಂಭ ವಾಗಿದೆ. ಇವೆಲ್ಲವುಗಳ ಮಧ್ಯೆ ಅತಿ ಹಿಂದುಳಿದ ಜಾತಿಗಳು ಹೇಳ ಹೆಸರಿಲ್ಲದಂತೆ ಕಣ್ಮರೆಯಾಗಲಿವೆ. ಈ ನಿಟ್ಟಿನಲ್ಲಿ ಅತಿ ಹಿಂದುಳಿದ ವರ್ಗಗ ಳಿಗೆ ಸೇರಿದ ಸಮುದಾಯದ ಎಲ್ಲಾ ಕ್ಷೇತ್ರದವರೂ ಒಗ್ಗಟ್ಟಿನ ಹೋರಾಟ ನಡೆಸುವುದು ಅತ್ಯವಶ್ಯ ಎಂದು ಹೇಳಿದರು.
ಐಎಎಸ್ ನಿವೃತ್ತ ಅಧಿಕಾರಿ ಶ್ರೀನಿವಾಸಾಚಾರಿ ಮಾತನಾಡಿ ಅತಿ ಹಿಂದುಳಿದ ವರ್ಗಗಳ ಮೇಲೆ ರಾಜ್ಯದಲ್ಲಿ ಅಪಾರವಾದ ಅನ್ಯಾಯ ನಡೆಯುತ್ತಿದೆ. ಸಾಂವಿಧಾನತ್ಮಕವಾಗಿ ಅತಿ ಹಿಂದುಳಿದ ಸಮುದಾಯದ ಹಕ್ಕನ್ನು ಕಸಿದುಕೊಳ್ಳುವ ಶಕ್ತಿಗಳ ವಿರುದ್ದ ಸಂಘಟನೆ ಮಾಡಬೇಕಾದ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ರಾಜ್ಯದ ನಿವೃತ್ತ ಹಾಗೂ ಹಾಲಿ ಹಿರಿಯ ಅಧಿಕಾರಿಗಳು ಕೈಜೋಡಿಸುವುದು ಅನಿವಾರ್ಯ ಎಂದು ಹೇಳಿದರು.
ಸಭೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿಗಳಾದ ನಿರಂಜನ್ ಕೆ ಆರ್, ಬಿ. ಎನ್. ಕೃಷ್ಣಯ್ಯ, ಪ್ರಭಾಕರ್, ಮಾಜಿ ಕೆಪಿಎಸ್‌ಸಿ ಸದಸ್ಯ ಲಕ್ಷ್ಮಿನರಸಯ್ಯ, ಹಿರಿಯ ಅಧಿಕಾರಿಗಳಾದ ಎಂ ಲಕ್ಷ್ಮಣ್, ಹೆಚ್ ಟಿ ಮೋಹನ್ ದಾಸ್, ಪಿ. ಮುನಿರಾಜಪ್ಪ, ಗೋಪಾಲಪ್ಪ, ಬಿ.ಪಿ ಲಿಂಗಣ್ಣ, ಶ್ರೀನಿವಾಸ್, ಮುನಿಕೃಷ್ಣಪ್ಪ, ಎಂ.ಡಿ ನರಸಿಂಹ ಮೂರ್ತಿ, ಎಲ್ ಎ ಮಂಜುನಾಥ್, ಎನ್ ಪ್ರಭಾಕರ್, ಡಿ.ಕೆ ಮೋಹನ್, ಆರ್ ಶ್ರೀಧರ್, ಬಿ.ಪಿ ಹನುಮಂತರಾಯಪ್ಪ, ವಕೀಲರಾದ ರಾಜಶೇಖರ್ ಹೆಚ್ ಪಿ ಸೇರಿದಂತೆ ಹಲವರು ಮಂದಿ ಅಧಿಕಾರಿಗಳು ಮತ್ತು ನೌಕರರು ಹಾಗೂ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ ನಾಗರಾಜ್ ಪಾಲ್ಗೊಂಡಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795