ವಿಜಯ ಸಂಘರ್ಷ
ಶಿವಮೊಗ್ಗ: ಪುನೀತ್ ರಾಜ್ಕುಮಾರ್ ನಿಧನದಿಂದ ರಾಜ್ಯಕ್ಕೆ ಸೂತಕದ ಛಾಯೆ ಆವರಿಸಿದೆ. ಪುನೀತ್ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಶಿವಮೊಗ್ಗದ ರಸ್ತೆಯೊಂದಕ್ಕೆ ಅಭಿಮಾನಿಗಳು ಅವರ ಹೆಸರನ್ನೇ ಇಟ್ಟಿದ್ದಾರೆ.
ನಗರದ ಲಕ್ಷ್ಮಿ ಟಾಕೀಸ್ ಬಳಿಯ ಚಾನಲ್ ಪಕ್ಕದ ಎರಡು ಕಿ.ಮೀ ಉದ್ದದ ರಸ್ತೆಗೆ ‘ಪುನೀತ್ ರಾಜ್ಕುಮಾರ್ ರಸ್ತೆ’ ಎಂದು ಸ್ಥಳೀಯರು ಹಾಗೂ ಅಭಿಮಾನಿಗಳು ನಾಮಕರಣ ಮಾಡಿ, ಬೋರ್ಡ್ ಹಾಕಿದ್ದಾರೆ.ಪುನೀತ್ ರಾಜ್ಕುಮಾರ್ ರಸ್ತೆಯ ಹೆಸರನ್ನು ಅಧಿಕೃತಗೊಳಿಸುವಂತೆ ಶಿವಮೊಗ್ಗ ಮಹಾನಗರ ಪಾಲಿಕೆಗೆ ಮನವಿ ಕೂಡ ಮಾಡಿದ್ದಾರೆ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣದಿಂದ ಇಡೀ ಕರುನಾಡ ಜನ ನೋವಲ್ಲಿ ಮರುಗುತ್ತಿದ್ದಾರೆ. ದಿನ ಕಳೆದರೂ ಅಪ್ಪು ಸಮಾಧಿಯ ಮುಂದೆ ಕಣ್ಣೀರು ಹಾಕಿ ದುಃಖ ತೋಡಿಕೊಳ್ಳುತ್ತಿದ್ದಾರೆ. ಹೌದು, ಈ ರೋಧನೆಯ ಜೊತೆಗೆ ಅಗಲಿದ ರಾಜಕುಮಾರನ ನೆನಪಿಗೋಸ್ಕರ ಅಭಿಮಾನಿಗಳು ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಡಾ. ರಾಜ್ ಕುಮಾರ್ ಸ್ಮರಣಾರ್ಥವಾಗಿ ಅಭಿಮಾನಿಗಳ ಸಂಘ ಅವರ ನೆನಪಿಗೋಸ್ಕರ ಬೆಂಗಳೂರಿನಲ್ಲಿ ಡಾ. ರಾಜ್ ಕುಮಾರ್ ರಸ್ತೆ ಎಂದು ಹೆಸರಿಟ್ಟಿರೋದು ಗೊತ್ತೇ ಇದೆ. ಅಂತಹ ಮಹಾನ್ ಕಲಾವಿದನಿಗೆ ಸಲ್ಲಲೇ ಬೇಕಾದ ಗೌರವ ಅದಾಗಿತ್ತು. ಇದಲ್ಲದೆ ಕೆಲವು ಹಿರಿಯ ಕಲಾವಿದರ ಹೆಸರುಗಳನ್ನೂ ರಸ್ತೆಗಳಿಗೆ ಹೆಸರಿಡಲಾಗಿದೆ. ಇಂತಹ ಗೌರವಗಳ ಸಾಲಿನಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ಹೆಸರೂ ಕೇಳಿಬರುತ್ತಿದೆ.
ನಟಸಾರ್ವಭೌಮನ ಅಭಿಮಾನಿಗಳು ಈಗಾಗಲೇ ಪುನೀತ್ ಅವರ ಹೆಸರನ್ನು ಸುಮಾರು ಒಂದು ಕಿ.ಮೀ ಉದ್ದದ ರಸ್ತೆಗೆ ನಾಮಕರಣ ಮಾಡಲು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಕಳೆದ ನವೆಂಬರ್ 1 ರಂದೇ ಶಿವಮೊಗ್ಗದ ಆಯನೂರ್ ಗೇಟ್ ನಿಂದ ಲಕ್ಷ್ಮಿ ಚಲನಚಿತ್ರ ಮಂದಿರದವರೆಗಿನ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರಿಡಲಾಗಿದೆ.
ಈ ಬಗ್ಗೆ ಮಾತನಾಡಿದ ಮೇಯರ್ ಸುನೀತಾ ಅಣ್ಣಪ್ಪ, ಪುನೀತ್ ಅವರ ಅಭಿಮಾನಿಗಳು ಸರ್ಕಾರದ ಮುಂದೆ ಈ ಬೇಡಿಕೆಯಿಟ್ಟಿದ್ದರು. ನಾಮಕರಣ ಅಧಿಕೃತಗೊಳಿಸುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ, ಇನ್ನು ಸರ್ಕಾರ ಅಧಿಕೃತಗೊಳಿಸುವುದು ಬಾಕಿ ಇದೆ ಎಂದು ತಿಳಿಸಿದ್ದಾರೆ.
ಪುನೀತ್ ಅವರಿಗೆ ಶಿವಮೊಗ್ಗದಲ್ಲಿ ನಿಕಟ ಸಂಬಂಧಿಗಳೂ ಇರುವುದರಿಂದ ಜಿಲ್ಲೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಸಕ್ರೆಬೈಲು ಆನೆ ಶಿಬಿರದಲ್ಲಿ ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕಾಗಿ ಅವರು ಕೊನೆಯ ಭೇಟಿ ನೀಡಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795