ಪೇಜಾವರ ಶ್ರೀಗಳವರ ಕುರಿತು ಅವಹೇಳನಕಾರಿ ಹೇಳಿಕೆ ಖಂಡಿಸಿ ಮನವಿ

 

ವಿಜಯ ಸಂಘರ್ಷ



ಭದ್ರಾವತಿ: ಸಂಗೀತ ನಿರ್ದೇಶಕ ಹಂಸಲೇಖರವರು ಪೇಜಾವರ ಶ್ರೀಪಾದಂಗಳವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಅಖಿಲ ಭಾರತ ಮಾಧ್ವ ಮಹಾ ಮಂಡಳಿ ನೇತೃತ್ವದಲ್ಲಿ  ಮಂಗಳವಾರ ತಹಸೀಲ್ದಾರ್‌ರವರಿಗೆ ಮನವಿ ಸಲ್ಲಿಸಿದವು.

ಮನವಿ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಆಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣದ ಹೋರಾಟದಲ್ಲಿ ಮುಂಚೂಣಿಗೆ ಬಂದು ಸನಾತನ ಹಿಂದೂ ಧರ್ಮದ ಏಳಿಗೆಯ ಕಾರ್ಯವನ್ನು ಕೈಗೊಂಡಿರುತ್ತಾರೆ. ಸಮಾಜದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಲು ದಲಿತ ಕೇರಿಗಳಲ್ಲಿ ಸಂಚರಿಸಿ ಧರ್ಮ ಜಾಗೃತಿ ಉಂಟು ಮಾಡುವ ಜೊತೆಗೆ ಅಸ್ಪೃಶ್ಯರು ಸಹ ಮುಖ್ಯವಾಹಿನಿಗೆ ಬರಲು ಶ್ರಮಿಸಿದ್ದ ಸಂತ ಶ್ರೇಷ್ಠರಾಗಿದ್ದಾರೆ ಎಂದರು.

ಇಂತಹ ಮಹಾನ್ ಚೇತನ ಕುರಿತು ಹಂಸಲೇಖರವರು ಅವಹೇಳನ ಕಾರಿಯಾಗಿ ಮಾತನಾಡಿರುವುದು ಅಕ್ಷಮ್ಯ. ಇದರಿಂದಾಗಿ ಮಾಧ್ವ ಸಮಾಜ, ಬ್ರಾಹ್ಮಣ ಸಮಾಜ ಹಾಗು ಸಮಸ್ತ ಬಾಂಧವರ ಭಾವನೆಗಳಿಗೆ ನೋವುಂಟು ಮಾಡಿದೆ. ಇಷ್ಟೆ ಅಲ್ಲದೆ ಇತ್ತೀಚೆಗೆ ಕಿಡಿಗೇಡಿಯೋರ್ವ ಶ್ರೀಪಾದಂಗಳವರ ಭಾವಚಿತ್ರವನ್ನು ಪಾದರಕ್ಷೆಯಿಂದ ತುಳಿದು ಅಸಂಖ್ಯಾತ ಭಕ್ತರ ಭಾವನೆಗಳಿಗೆ ದುಃಖವನ್ನುಂಟು ಮಾಡಿರುತ್ತಾನೆ. ಈ ಕಿಡಿಗೇಡಿ ವಿರುದ್ಧ ವಿರುದ್ಧ ಹಾಗು ಅವಹೇಳನಕಾರಿಯಾಗಿ ಮಾತನಾಡಿರುವ ಹಂಸಲೇಖರವರ ವಿರುದ್ದ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ಮಾಧ್ವ ಮಹಾ ಮಂಡಳಿ, ಶ್ರೀ ಸಂಕರ್ಷಣ ಧರ್ಮ ಸಂಸ್ಥೆ, ಶ್ರೀ ಸತ್ಯಪ್ರಮೋದ ಸೇವಾ ಸಮಿತಿ, ಶ್ರೀ ಶ್ರೀನಿವಾಸ ಕಲ್ಯಾಣ ಸಮಿತಿ, ಶ್ರೀ ಹರಿದಾಸ ಭಜನಾ ಮಂಡಳಿ, ಕರಾವಳಿ ವಿಪ್ರ ಬಳಗ, ಶ್ರೀ ಗುರುರಾಜ ಸೇವಾ ಸಮಿತಿ, ಜ್ಞಾನವಾಹಿನಿ ಭಜನಾ ಮಂಡಳಿ, ಹರಿಪ್ರಿಯ ಭಜನಾ ಮಂಡಳಿ ಮತ್ತು ವಿಜಯೀಂದ್ರ ಭಕ್ತ ಮಂಡಳಿ ಪ್ರಮುಖರಾದ ವಿ. ಜಯತೀರ್ಥ, ನರಸಿಂಹಚಾರ್, ಗೋಪಾಲಚಾರ್, ಸಿ. ರಾಘವೇಂದ್ರ, ಜಿ. ರಮಾಕಾಂತ್, ಕೆ.ಆರ್ ವೆಂಕಟೇಶ್ ರಾವ್, ಎನ್. ವಂದನಾ, ಪವನ್‌ಕುಮಾರ್ ಉಡುಪ, ನಿರಂಜನಚಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು