ವಿಜಯಸಂಘರ್ಷ /ತೀರ್ಥಹಳ್ಳಿ
ಯಕ್ಷಗಾನ ಕೇವಲ ಜೀವನೋಪಾಯಕ್ಕೆ ಎಂಬುದು ತಪ್ಪು.ಆತ್ಮಾನಂದ ಆಗಬೇಕೆಂದರೆ ಆರ್ಥಿಕ, ವ್ಯವಹಾರಿಕ, ಕೌಟುಂಬಿಕ, ಕಲಾ ಶ್ರೀಮಂತಿಕೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಯಕ್ಷಗಾನ ಕಲಾವಿದ ಎಂ.ಕೆ.ರಮೇಶ್ ಆಚಾರ್ಯ ಹೇಳಿದರು.
ಪಟ್ಟಣದ ರಾಮೇಶ್ವರ ಸಭಾಂಗಣ ದಲ್ಲಿ ಪುಟ್ಟ ಬಾಲಕನಿಗೆ ಗೆಜ್ಜೆ ಕಟ್ಟುವ ಮೂಲಕ ಯಕ್ಷಗುರು ಶೈಲೇಶ್ ನೇತೃತ್ವದ ಯಕ್ಷಭೂಮಿ ಯಕ್ಷಗಾನ ಕಲಾಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
'ಸಾಂಸ್ಕೃತಿಕವಾಗಿ ಸಾಹಿತ್ಯ, ಸಂಗೀತ, ಯಕ್ಷಗಾನ, ಶಿಲ್ಪಕಲೆ ಮುಂತಾದ ವೈವಿಧ್ಯಮಯ ಕ್ಷೇತ್ರದಲ್ಲಿ ತಾಲ್ಲೂಕಿನ ಸಾಧನೆ ದೊಡ್ಡದು. ಮರಹಳ್ಳಿ ನರ ಸಿಂಹಶಾಸ್ತ್ರಿ ಅವರು ನೂರಾರು ಯಕ್ಷ ಗಾನ ಪ್ರಸಂಗಗಳನ್ನು ರಚಿಸಿದ್ದರೂ ಘಟ್ಟದವರು ಎಂಬ ಕಾರಣಕ್ಕೆ ಅಲಕ್ಷ್ಯಿ ಸಲಾಗಿದೆ. ಯಕ್ಷಗಾನ ಕರಾವಳಿಯ ಕಲೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಅದು ಕರ್ನಾಟಕದ ಕಲೆ' ಎಂದರು.
ರಂಗಾಯಣ ನಿರ್ದೇಶಕ ಸಂದೇಶ ಜವಳಿ ಮಾತನಾಡಿ, 'ಕುವೆಂಪು, ಅನಂತಮೂರ್ತಿ, ಪರಮೇಶ್ವರ ಭಟ್ಟ, ಎಂ.ಕೆ.ಇಂದಿರಾ, ಗಿರೀಶ್ ಕಾಸರವಳ್ಳಿ, ಕೋಡ್ಲು ರಾಮಕೃಷ್ಣ, ನಟ ಶಾಂತ ಕುಮಾರ್, ಸೀತಾರಾಮಾಚಾರ್ ಸೇರಿ ಅನೇಕರು ವಿವಿಧ ಕ್ಷೇತ್ರದಲ್ಲಿ ಅಗ್ರ ಗಣ್ಯರು. ಒಂದು ಪರಂಪರೆಯಿಂದ ಮತ್ತೊಂದು ಪರಂಪರೆಗೆ ಕಲೆ ಮುಂದುವರಿಯಬೇಕು. ಆದರೆ, ಈಚೆಗೆ ಕಲೆ ಸೋರಿಕೆಯಾದಂತೆ ಕಾಣಿಸುತ್ತಿದೆ. ಪೂರ್ಣ ಪ್ರಮಾಣದ ಕಲಾ ಶ್ರೀಮಂತಿಕೆ ಶಿಥಿಲಾವಸ್ಥೆಗೆ ತಲುಪುತ್ತಿದೆ' ಎಂದು ಬೇಸರ ವ್ಯಕ್ತಪಡಿಸಿದರು.
ಕಲೆಯನ್ನು ಉಳಿಸಿ ಬೆಳೆಸುವ ಬಹುದೊಡ್ಡ ಜವಾಬ್ದಾರಿ ಯುವ ಜನರ ಮೇಲಿದೆ. ಔದ್ಯೋಗಿಕ ಜೀವನದ ಜೊತೆಗೆ ಕಲೆ ಉಳಿಸುವ ಮಹತ್ವದ ಕೆಲಸ ಮಾಡಬೇಕು. ಯಕ್ಷಭೂಮಿ ಕೇಂದ್ರಕ್ಕೆ ಅಗತ್ಯವಾದ ಆರ್ಥಿಕ, ಸಾಂಸ್ಕೃತಿಕ ತಳಹದಿ ಕಟ್ಟಿಕೊಡಲು ಬದ್ಧನಾಗಿರುತ್ತೇನೆ' ಎಂದು ಆಶ್ವಾಸನೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗಶಿಕ್ಷಕ ಶ್ರೀಕಾಂತ್ ಕುಮುಟ, ಪತ್ರಕರ್ತರ ಸಂಘದ ಅಧ್ಯಕ್ಷ ಡಾನ್ ರಾಮಣ್ಣ ಮಾತನಾಡಿದರು. ಶೈಲೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಂಗ ನಿರ್ದೇಶಕ ಶ್ರೀಪಾದ್ ತೀರ್ಥಹಳ್ಳಿ ವಂದಿಸಿದರು. ಶಿವಕುಮಾರ್ ತೀರ್ಥಹಳ್ಳಿ ನಿರೂಪಿಸಿದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ
+91 9743225795