ವಿಜಯ ಸಂಘರ್ಷ /ಸಾಗರ
ಚುನಾಯಿತ ಪ್ರತಿನಿಧಿಗೆ ಗೌರವ ಕೊಡದ ನಗರಸಭೆ ಆಡಳಿತ ವೈಖರಿಯನ್ನು ಖಂಡಿಸಿ ಬುಧವಾರ ನಗರಸಭಾ ಕಾಂಗ್ರೆಸ್ ಸದಸ್ಯೆ ಮಧುಮಾಲತಿ ಪೌರಾಯುಕ್ತರ ಕೊಠಡಿ ಎದುರು ಏಕಾಂಗಿ ಧರಣಿ ನಡೆಸಿ, ಆಡಳಿತದ ವಿರುದ್ಧ ಧಿಕ್ಕಾರ ಕೂಗಿದ ಘಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಧುಮಾಲತಿ ಕಲ್ಲಪ್ಪ, ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಮಾತಿಗೆ ಬೆಲೆ ಇಲ್ಲದಂತೆ ಆಗಿದೆ.ನಮ್ಮ ವಾರ್ಡ್‌ನ ಸಾರ್ವಜನಿಕ ರೊಬ್ಬರು ಫಾರಂ ನಂ. 3 ಕೊಡಿಸು ವಂತೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಖಾತೆದಾರರಿಗೆ ನೀರಿನ ಕಂದಾಯ, ಮನೆ ಕಂದಾಯ ಪಾವತಿ ಮಾಡುವಂತೆ ತಿಳಿಸಲಾಗಿತ್ತು. ಅದೆಲ್ಲವನ್ನೂ ಪಾವತಿ ಮಾಡಿ ಫಾರಂ ನಂ. 3 ಕೊಡುವಂತೆ ವ್ಯವಸ್ಥಾಪಕ ವೆಂಕಟೇಶ್ ಅವರಿಗೆ ಮನವಿ ಮಾಡಲಾಗಿತ್ತು. ವ್ಯವಸ್ಥಾಪಕ ವೆಂಕಟೇಶ್ ಈ-ಸ್ವತ್ತು ಮಾಡಿಸಿದರೆ ಮಾತ್ರ ಫಾರಂ ನಂ. 3ಕೊಡುವುದಾಗಿ ತಿಳಿಸಿದರು.
ನಾನು ಅಂತಹ ಸರ್ಕಾರಿ ಆದೇಶವಿದ್ದರೆ ಕೊಡಿ ಎಂದು ಕೇಳಿದ್ದೇನೆ. ಆಗ ವ್ಯವಸ್ಥಾಪಕ ವೆಂಕಟೇಶ್ ಅವರು ಸರ್ಕಾರಿ ಆದೇಶವಲ್ಲ, ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಹೇಳಿದರು. ನಾನು ಜಿಲ್ಲಾಧಿಕಾರಿಗಳ ಸುತ್ತೋಲೆ ತೋರಿಸಿ ಎಂದು ಕೇಳಿದಾಗ ವೆಂಕಟೇಶ್ ನಾನು ಸದಸ್ಯೆ ಎನ್ನುವುದನ್ನು ಸಹ ನೋಡದೆ ದಬಾಯಿಸಿದ್ದಾರೆ ಎಂದು ದೂರಿದರು. ನಾನು ಐದಾರು ಬಾರಿ ನಗರಸಭೆಗೆ ಅಲೆದಾಡಿದರೂ ಸಿಗದ ಫಾರಂ ನಂ. 3 ಒಬ್ಬ ಮೇಸ್ತ್ರಿ ತಂದು ನಮ್ಮ ವಾರ್ಡ್‌ನ ಖಾತೆದಾರರಿಗೆ ಕೊಟ್ಟಿದ್ದಾರೆ. ಹಾಗಾದರೆ ನಗರಸಭೆ ಸದಸ್ಯರ ಮಾತಿಗೆ ಬೆಲೆ ಇಲ್ಲವೆ ಎಂದು ಪ್ರಶ್ನಿಸಿದ ಅವರು, ನಗರಸಭೆಯಲ್ಲಿ ಹಣ ಕೊಟ್ಟರೆ ಏನು ಬೇಕಾದರೂ ಮಾಡಿ ಕೊಡುತ್ತಾರೆ. ಇಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಬೆಲೆ ಇಲ್ಲದಂತೆ ಆಗಿದೆ. ಸದಸ್ಯರಿಗೆ ಆಗುತ್ತಿರುವ ಅವಮಾನವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಶಾಸಕರು ಮತ್ತು ನಗರಸಭೆ ಅಧ್ಯಕ್ಷರು ಸ್ಥಳಕ್ಕೆ ಬಂದು ನ್ಯಾಯ ಕೊಡಿಸುವ ತನಕ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದು ಕುಳಿತುಕೊಂಡರು.
ಕ್ರಮದ ಭರವಸೆ: ಪ್ರತಿಭಟನಾ ಸ್ಥಳಕ್ಕೆ ಬಂದ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಚುನಾಯಿತ ಪ್ರತಿನಿಧಿಗಳಿಗೆ ಅಗೌರವ ತರುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಜೊತೆಗೆ ಮುಂದೆ ಇಂತಹ ಘಟನೆ ನಡೆಯದಂತೆ ಗಮನ ಹರಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಸದಸ್ಯರಾದ ಸೈಯದ್ ಜಾಕೀರ್, ಶಂಕರ್ ಅಳ್ವಿಕೋಡು, ಭಾವನಾ ಸಂತೋಷ್, ಸತೀಶ್ ಕೆ., ಪೌರಾಯುಕ್ತ ರಾಜು ಬಣಕಾರ್, ಮುಖಂಡರಾದ ಅನ್ವರ್ ಭಾಷಾ, ತಾರಾಮೂರ್ತಿ ಮತ್ತಿತರರಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ
+91 9743225795