ವಿಜಯಸಂಘರ್ಷ /ಸಾಗರ
ಯಕ್ಷಗಾನಕ್ಕೆ ಗಟ್ಟಿತನವನ್ನು ತಂದುಕೊಟ್ಟವರು ಕೆರೆಮನೆ ಶಂಭು ಹೆಗಡೆ. ಯಕ್ಷಗಾನ ಮತ್ತು ಶಂಭು ಹೆಗಡೆ ಅವರದ್ದು ಅವಿನಾಭಾವ ನಂಟಾಗಿತ್ತು ಎಂದು ಚಿಂತಕ, ಫೋಟೋಗ್ರಾಫರ್, ರಂಗನಟ ಜಿ.ಆರ್. ಪಂಡಿತ್ ಹೇಳಿದರು.
ಇಲ್ಲಿನ ಸಾಹಿತ್ಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿ ದ್ದ ಕೆರೆಮನೆ ಶಂಭು ಹೆಗಡೆ ದತ್ತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿ, ಶಂಭು ಹೆಗಡೆ ಅವರು ತಮಗೆ ನೀಡಿದ ಪಾತ್ರ ಹಾಗೂ ಕಾರ್ಯಗಳಲ್ಲಿ ತಮ್ಮನ್ನು ತಾವು ಆಳವಾಗಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಬದ್ಧತೆಯನ್ನು ಸಾಕಾರಗೊಳಿಸುತ್ತಿದ್ದರು.
ಬದುಕಿನ ಜೊತೆ ಯಕ್ಷಗಾನವನ್ನು ಬಹು ಎತ್ತರಕ್ಕೆ ಕೊಂಡೊಯ್ದ ಅಪರೂಪದ ಕಲಾವಿದ ಅವರು. ಪ್ರೇಕ್ಷರ ಮನಮುಟ್ಟುವಂತೆ ಪಾತ್ರಗಳನ್ನು ನಿರ್ವಹಿಸುವ ಕಲಾತ್ಮಕತೆ ಅವರಲ್ಲಿತ್ತು. ರಂಗಸಜ್ಜಿಕೆಗೆ ಹೊಸ ಆಯಾಮವನ್ನು ನೀಡಿ, ಆಯಾಯ ಕಾಲಘಟ್ಟಕ್ಕೆ ಪೂರಕವಾದ ರೀತಿಯಲ್ಲಿ ಭಾವಾಭಿನಯಗಳ ಮೂಲಕ ಜನರ ಮನಸ್ಸಲ್ಲಿ ಆಳವಾಗಿ ಗುರುತಿಸಿ ಕೊಂಡಿದ್ದರು ಎಂದು ಹೇಳಿದರು.
ಯಕ್ಷಗಾನ ಎನ್ನುವುದು ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ವಿಶಿಷ್ಟವಾದ ಪರಂಪರೆ ಯನ್ನು ಹೊಂದಿದೆ. ಅನೇಕ ದಿಗ್ಗಜರು ಯಕ್ಷಗಾನ ಕ್ಷೇತ್ರವನ್ನು ಶ್ರೀಮಂತವಾಗಿ ಸಿದ್ದಾರೆ. ಯಕ್ಷಗಾನ ಕಲೆಯನ್ನು ವಿಶ್ವ ಮಟ್ಟದಲ್ಲಿ ವಿಸ್ತರಿಸಿದ ಕೀರ್ತಿ ಶಂಭು ಹೆಗಡೆ ಅವರಿಗೆ ಸಲ್ಲುತ್ತದೆ. ಕೆರೆಮನೆ ಶಂಭು ಹೆಗಡೆ ಅವರನ್ನು ನೆನಪು ಮಾಡಿಕೊಳ್ಳುವಂತಹ ಕಾರ್ಯವನ್ನು ದತ್ತಿ ಉಪನ್ಯಾಸದ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿರುವ ಕಾರ್ಯ ಅಭಿನಂದನೀಯ ಎಂದರು.
ದತ್ತಿ ಒದಗಿಸಿದ ಹಿರಿಯ ಸಾಹಿತಿ ಡಾ| ಜಿ.ಎಸ್.ಭಟ್ ಮಾತನಾಡಿ, ದತ್ತಿ ನೀಡುವುದು ಸಹಜವಾದ ಪ್ರಕ್ರಿಯೆಯಾದರೂ ಸಹ ಈ ಮೂಲಕ ದತ್ತಿಯ ಆಶಯಕ್ಕೆ ಮಹತ್ವವನ್ನು ನೀಡುವ ಕೆಲಸವಾಗುತ್ತಿರುವುದು ವಿಶೇಷವಾಗಿದೆ. ಯಕ್ಷಗಾನದಲ್ಲಿ ಪಾತ್ರ ನಿರ್ವಹಣೆ ಅತಿ ಮುಖ್ಯವಾಗಿದೆ. ನೈಜವಾದ ವಿಚಾರವನ್ನು ಜನರಿಗೆ ತಿಳಿಸುವ ಕಾರ್ಯ ಯಕ್ಷಗಾನದಿಂದ ಮಾತ್ರ ಸಾಧ್ಯ. ಕೆರೆಮನೆ ಶಂಭು ಹೆಗಡೆಯವರು ತಮ್ಮ ಜೀವಮಾನದುದ್ದಕ್ಕೂ ಯಕ್ಷಗಾನವನ್ನು ಉಳಿಸಿ ಬೆಳೆಸಿದವರು. ಅವರ ಕಾರ್ಯಕ್ಷಮತೆ ನಾಡಿಗೆ ನಾಡಿಗೆ ಮೆಚ್ಚುವಂತಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಟಿ.ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಭಾರತೀಯ ಜೀವವಿಮಾ ನಿಗಮದ ಎಂ.ಎಲ್.ಭಟ್ ಉಪಸ್ಥಿತರಿದ್ದರು. ಮಮತಾ ಪ್ರಾರ್ಥಿಸಿದರು. ಉಮೇಶ್ ಹಿರೇನೆಲ್ಲೂರು ಸ್ವಾಗತಿಸಿದರು. ಕೋದಂಡ ಸಾಗರ್ ವಂದಿಸಿದರು. ಡಾ| ಪ್ರಸನ್ನ ಟಿ. ನಿರೂಪಿಸಿದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ
+91 9743225795