ಇದೊಂದೊ ಗಿಮಿಕ್ ಬಜೆಟ್ ಕಾಂಗ್ರೆಸ್ ಜಿಲ್ಲಾ ವಕ್ತಾರ ರಮೇಶ್ ಶಂಕರಘಟ್ಟ

 ವಿಜಯ ಸಂಘರ್ಷ



ಭದ್ರಾವತಿ : ಈ ಬಾರಿಯ ಬಜೆಟ್‍ ನಲ್ಲಿ ಹಸಿವು ನೀಗಿಸುವ ಯಾವ ಯೋಜನೆಗಳೂ ಇಲ್ಲ ಇದೊಂದೊ ಗಿಮಿಕ್ ಬಜೆಟ್ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ವಕ್ತಾರ ರಮೇಶ್ ಶಂಕರಘಟ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ರಾಜ್ಯ ಸೇರಿದಂತೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿ ರುವ ಕೇಂದ್ರ ಸರ್ಕಾರದ ಬಜೆಟ್ ಚುನಾವಣಾ ಗಿಮಿಕ್ ಬಜೆಟ್ ಆಗಿದ್ದು, ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ದೇಶದ ಜನತೆಗೆ ಕೇಂದ್ರದ ಬಜೆಟ್ ನೀರಾಶೆಗೊಳಿಸಿದೆ. ಸರಕಾರ ಪೆಟ್ರೋಲ್, ಗ್ಯಾಸ್ ಬೆಲೆ ಯನ್ನು ಇಳಿಕೆ ಮಾಡಬೇಕಿತ್ತು. ಕೇವಲ ರಾಜಕೀಯ ಉದ್ದೇಶ ಇಟ್ಟುಕೊಂಡು ಬಜೆಟ್ ತಯಾರಿಸಲಾಗಿದೆ ಎಂದು ಕಿಡಿ ಕಾರಿದರು.


ಜಿಲ್ಲೆಯಲ್ಲಿನ ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರು ಹೊಂದಿದ್ದ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ. ಲಕ್ಷಾಂತರ ಕುಟುಂಬಗಳು ಅಡಿಕೆ ಕೃಷಿಯನ್ನೇ ನಂಬಿ ಬದುಕು ಕಟ್ಟಿ ಕೊಂಡಿವೆ. ಇತ್ತೀಚಿನ ವರ್ಷಗಳಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ, ರೋಗ ಗಳ ಹೊಡೆತದಿಂದ ಅಡಿಕೆ ಬೆಳೆ ಹಿಂದೆಂದಿಗಿಂತಲೂ ತೀವ್ರ ಹಾನಿ ಗೊಂಡು ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜೊತೆಗೆ ಬೆಲೆ ಇಳಿಕೆ ಯಿಂದಾಗಿ ತೀವ್ರ ನಷ್ಟವನ್ನು ಬೆಳೆಗಾ ರರು ಅನುಭವಿಸುತ್ತಿದ್ದಾರೆ ಎಂದಿದ್ದಾರೆ.


ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‍ನಲ್ಲಿ 5300 ಕೋಟಿ ರೂ.ಗಳ ನ್ನು ಘೋಷಣೆ ಮಾಡಲಾಗಿದೆ. ಆದರೆ, ಈ ಘೋಷಣೆಯಿಂದ ಶಿವಮೊಗ್ಗ ಜಿಲ್ಲೆಗೆ ಯಾವುದೇ ಪ್ರಯೋಜನವಿಲ್ಲ. 2014ರಲ್ಲಿ ನಡೆದ ಲೋಕಸಭಾ ಚುನಾವಣೆ ಸಂದರ್ಭ ದಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುವುದಾಗಿ ಭರವಸೆ ಕೊಟ್ಟು ಯುವಜನರನ್ನು ದಿಕ್ಕು ತಪ್ಪಿಸಿ ದ್ದ ಪ್ರಧಾನಮಂತ್ರಿ ಮೋದಿಯವರು, ಈ ಬಜೆಟ್ ಮೂಲಕ ಮತ್ತೊಮ್ಮೆ ಯುವಜನರ ದಿಕ್ಕು ತಪ್ಪಿಸುವ ಮತ್ತು ಚುನಾವಣೆಗಾಗಿ ಮೂರು ವರ್ಷ ದೊಳಗೆ 48 ಲಕ್ಷ ಯುವಜನರಿಗೆ ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆಯಡಿ ಶಿಷ್ಯವೇತನ ನೀಡುವುದಾಗಿ ಚುನಾವಣೆಯನ್ನು ಗುರಿಯಾಗಿಸಿಕೊಂಡು ಘೋಷಣೆ ಮಾಡಲಾಗಿದೆ. ಇದೊಂದು ಬೋಗಸ್ ಬಜೆಟ್ ಎಂದು ಜರಿದಿದ್ದಾರೆ.


ಒಟ್ಟಾರೆ ಕೇಂದ್ರ ಸರ್ಕಾರದ ಬಜೆಟ್ ಬಡವರ ವಿರೋದಿ, ಹಸಿವು ನೀಗಿ ಸುವ ಯೋಜನೆಗಳು ಇಲ್ಲ, ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿ ನರೇಗಾ ಯೋಜನೆಯಡಿ ಅನುದಾನ ರಹಿತ ಬಜೆಟ್, ಅನ್ನಭಾಗ್ಯಕೆ ಕತ್ತರಿ, ರಸಗೊಬ್ಬರದ ಬೆಲೆ ಏರಿಕೆ, ಯುವ ಜನತೆಗೆ ಉದ್ಯೋಗ ಖಾತ್ರಿ ಇಲ್ಲ, ಪರಿಶಿಷ್ಟ ಜಾತಿ ಅಭಿವೃದ್ಧಿಗೆ ಯಾವುದೇ ಅಜೆಂಡಾ ಇಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು