ವಿಜಯ ಸಂಘರ್ಷ
ಭದ್ರಾವತಿ :ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ದಾಸರವಾಣಿಯಂತೆ- ಯಾವುದೇ ವಿದ್ಯೆಯನ್ನು ಗುರುಮುಖೇನ ಕಲಿತಾಗ ಅದು ಸಿದ್ಧಿಸುತ್ತದೆ. ಮುಂದೆ ಗುರಿ ಹಿಂದೆ ಗುರು ಇರಬೇಕು.
ಕೇವಲ ಶಾಲೆಯಲ್ಲಿ ಕಲಿಯುವ ಪಾಠಗಳು ಮಾತ್ರ ಪಾಠಗಳಲ್ಲ. ಅದು ಅಲ್ಪಮಟ್ಟಿಗೆ ವ್ಯವಹಾರ ಜ್ಞಾನವನ್ನು ನೀಡಬಹುದಷ್ಟೇ. ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು ಅನ್ನುವ ನುಡಿ ಕೇಳಿ ಬೆಳೆದವರು ಎಲ್ಲರೂ. ಹೆಜ್ಜೆ ಇಡಲು ಕಲಿಯುವುದು ಮನೆಯಿಂದಲೇ, ತಾಯಿಯ ಮುಂದೆಯೇ. ನಡೆಯುವಾಗ ಬಿದ್ದಾಗ ಎದ್ದು ನಿಲ್ಲಿಸುವಳು, ಮುಂದೆ ಹೋಗಲು ಸಹಕರಿಸುವವಳು ಜನನಿ. ಹಾಗೆಯೇ ಲೋಕಜ್ಞಾನ ಪಡೆಯಲು ಪಾಠಶಾಲೆ ಬೇಕಾಗುತ್ತದೆ. ಆದರೆ ಅದು ಕೇವಲ ಉರು ಹೊಡೆದು ನೀಡಿರುವ ಪಾಠಗಳ ಕುರಿತು ಪರೀಕ್ಷೆ ಬರೆದು ಅಂಕ ಗಳಿಸುವತ್ತಲೇ ಗಮನ ಹರಿಸಬೇಕಾಗುತ್ತದೆ. ಈಗಿನ ಒತ್ತಡದ ಜೀವನದಲ್ಲಿ ಅಂಕಗಳಿಕೆ ಯೇ ಮುಖ್ಯವಾಗಿರುವ ಹಿನ್ನೆಲೆಯಲ್ಲಿ, ಮಕ್ಕಳು ಮಾನಸಿಕವಾಗಿ ಕುಗ್ಗುವ, ಅನ್ಯ ದಾರಿ ಹಿಡಿಯುವುದನ್ನು ನಾವು ಕಾಣಬಹು ದಾಗಿದೆ. ಶಾಲೆಯ ಪಠ್ಯಗಳು ಉತ್ತಮ ಜೀವನವನ್ನು ರೂಪಿಸುವಲ್ಲಿ, ಸಂಸ್ಕಾರ ವನ್ನು ಮಕ್ಕಳಲ್ಲಿ ಬೆಳೆಸುವಲ್ಲಿ ಅಸಾಧ್ಯ ಅಂತಲೇ ಹೇಳಬಹುದೇನೋ. ಅದೂ ಅಲ್ಲದೇ ಶಾಲೆಗೆ ಉತ್ತಮ ಅಂಕಗಳಿಕೆಯ ಹಿನ್ನೆಲೆಯಲ್ಲಿ ಶಿಕ್ಷಕರೂ ಸಹ ಅದರತ್ತಲೇ ಗಮನ ಹರಿಸಬೇಕಾಗಿರುವುದರಿಂದ ಉತ್ತಮ ಗುಣಮಟ್ಟದ ಶಿಕ್ಷಣ ನಿರೀಕ್ಷಿ ಸುವುದು ಕಷ್ಟಸಾಧ್ಯ. ಆದರೂ ಹಲವು ಶಿಕ್ಷಕರು ಈ ನಿಟ್ಟಿನಲ್ಲಿ ಹೆಚ್ಚಿನ ಪರಿಶ್ರಮ ವನ್ನು ಹಾಕುತ್ತಿರುವುದನ್ನು ಇತ್ತೀಚೆಗೆ ನಾವು ಕಾಣಬಹುದಾಗಿದೆ. ಹಿಂದಿನ ಗುರುಕುಲ ಸಂಸ್ಕೃತಿಯಲ್ಲಿ ಉತ್ತಮ ಸಂಸ್ಕಾರಯುಕ್ತ ವಿದ್ಯಾಭ್ಯಾಸ ಮಾಡುವ ಅವಕಾಶ ವಿದ್ದುದನ್ನು ಪುರಾಣಗಳಿಂದ, ಇತಿಹಾಸ ದಿಂದ ತಿಳಿಯಬಹುದಾಗಿದೆ. ಪ್ರಸ್ತುತ ದಿನಗಳಲ್ಲಿ ಸಂಸ್ಕಾರ, ಸಂಸ್ಕೃತಿಗಳ ಕಲಿಕೆ ಮನೆಯಿಂದಲೇ ಪ್ರಾರಂಭಿಸಬೇಕು. ಮಕ್ಕಳು ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು ಸೂಕ್ತ ಮಾರ್ಗದರ್ಶಕರನ್ನು ಪಡೆದು ತಮ್ಮ ಗುರಿ ಸಾಧಿಸುವಲ್ಲಿ, ಯಶಸ್ಸು ಗಳಿಸುವಲ್ಲಿ ಹೆಜ್ಜೆ ಇಡಬೇಕು. ಸರ್ವಜ್ಞನ ವಚನದಂತೆ- ಮೊಸರ ಕಡೆಯಲು ಬೆಣ್ಣೆ, ಒಸೆದು ತೋರುವ ತೆರದಿ ಹಸನುಳ್ಳ ಗುರುವಿನುಪದೇಶ ದಿಂ ಮುಕ್ತಿ ವಶವಾಗದಿಹುದೇ- ಸರ್ವಜ್ಞ...ಎಷ್ಟು ಅರ್ಥಪೂರ್ಣವಲ್ಲವೇ.
ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಹೀಗೆ ಹೇಳುತ್ತಾರೆ- ಮಡಕೆಯ ಮಡುವಡೆ ಮಣ್ಣೇ ಮೊದಲು, ತೊಡುಗೆಯ ಮಾಡುವಡೆ ಹೊನ್ನೆ ಮೊದಲು, ಶಿವಪಥವನರಿವಡೆ ಗುರುಪಥವೆ ಮ್ದಲು, ಕೂಡಲಸಂಗಮದೇವನರಿವಡೆ ಶರಣರ ಸಂಗವೇ ಮೊದಲು...ಶಿವಪಥದಲ್ಲಿ ಸಾಗಬೇಕೆನ್ನುವ ಭಕ್ತನಿಗೆ ಗುರುವಿನ ಮಾರ್ಗದರ್ಶನ ಬೇಕು. ಗುರುಶಿಷ್ಯರು ಎರಡು ಕಣ್ಣುಗಳಿದ್ದ ಹಾಗೆ. ಹಾಗೆ ಒಬ್ಬನೇ ವ್ಯಕ್ತಿ ಶಿಷ್ಯನೂ ಆಗಬಲ್ಲ, ಗುರುವೂ ಆಗಬಲ್ಲ. ಶಿಷ್ಯನಲ್ಲಿರು ಭ್ರಾಂತಿಯನ್ನು ಸರಿಯಾದ ಜ್ಞಾನದ ಮೂಲಕ ನಿವಾರಿಸುವ ಕಾರ್ಯವನ್ನು ಗುರುವು ಮಾಡಬೇಕು.
ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ ಎನ್ನುವ ಇನ್ನೊಂದು ವಚನದಂತೆ - ಶಿಷ್ಯನ ಅಹಂಕಾರ ಅಜ್ಞಾನಗಳನ್ನು ಗುರು ತೊಡೆಯಬೇಕು. ಇಲ್ಲವಾದರೆ ಆತ ಒಳ್ಳೆಯ ಗುರುವಾಗು ವುದಿಲ್ಲ. ಒಳ್ಳೆಯ ಶಿಷ್ಯ ಸಿಕ್ಕರೆ ಗುರು ಗೆದ್ದಂತೆ ಎನ್ನುವುದು ಗುರುವಿನ ಗೆಲುವು ಆದರ್ಶ ಶಿಷ್ಯ ಸಿಕ್ಕಾಗ ಎನ್ಧುವುದು ಇದರಿಂದ ವ್ಯಕ್ತವಾಗುತ್ತದೆ. ಜ್ಞಾನದಿಂದಲಿ ಇಹವು, ಜ್ಞಾನದಿಂದಲಿ ಪರವು, ಜ್ಞಾನವಿಲ್ಲದಿರೆ ಸಕಲವೂ ತನಗಿದ್ದು ಹಾನಿ ಕಾಣಯ್ಯ ಸರ್ವಜ್ಞ- ಅರಿವೇ ಗುರು.
ಜ್ಯೋತಿಷ್ಯ ದಲ್ಲಿಯೂ ಸಹ ಗುರುಗ್ರಹ ಮುಖ್ಯವಾಗಿರುತ್ತದೆ. ಜೊತೆಗೆ ಮಿತ್ರಗ್ರಹ ಗಳಿದ್ದರೆ, ಶುಭ, ಶತ್ರು ಗ್ರಹಗಳಿದ್ದರೆ ಅಶುಭ .. ಮನೆನಿರ್ಮಾಣ ಕಾರ್ಯಕ್ಕೆ, ಮದುವೆ, ಉಪನಯನ, ಶುಭಕಾರ್ಯ ಗಳಿಗೆ ಗುರುಬಲ ನೋಡುವುದು ಸಾಮಾನ್ಯ. ಜ್ಯೋತಿಷಿಗಳು ಇದರ ಕುರಿತು ಹೇಳುತ್ತಾರೆ- ಪೂರ್ವದ ಕಡೆ ಜನನ, ಉತ್ತರದ ಕಡೆ ಒಳ್ಳೆಯ ಭೋಗಗಳು, ಪಶ್ಚಿಮದ ಕಡೆ ಸ್ವಲ್ಪ ರೋಗರುಜಿನ, ದಕ್ಷಿಣಜ ಕಡೆ ಪ್ರಯಾಣ ಅಂತೆ. ವಾಸ್ತುವಿನಲ್ಲಿಯೂ ಹಾಗೆಯೇ- ಅಗ್ನಿಯ ಅಡಿಗೆ, ಈಶಾನ್ಯದ ನಡಿಗೆ, ವಾಯುವ್ಯದ ಹೇಸಿಗೆ, ನೈರುತ್ಯದ ನಿದ್ದೆ ಎಂದು ಜ್ಯೋತಿಷ್ಯ, ವಾಸ್ತುವಿನಲ್ಲೂ ಸಹ ಗುದುಗ್ರಹದ ಕುರಿತು ಮಾಹಿತಿ ನೀಡುತ್ತಾರೆ.
ಗುರುಬ್ರಹ್ಮ ಗುರುರ್ವಿಷ್ಣೋ ಗುರುರ್ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಂದು ಅಂದು ಶಾಲೆಗಳಲ್ಲಿ ಕೇಳಿಬರುತ್ತಿದ್ದ ತರಗತಿ ಪ್ರಾರಂಭದ ಪ್ರಾರ್ಥನೆ. ಈಗ ಗುರುವೇ ನಮಃ ಎನ್ನುವಲ್ಲಿ ಗುರುವೇನ್ ಮಹಾ ಎನ್ನುವಂತಹ ಶಿಷ್ಯರೂ ಸಹ ಇದ್ದಾರೆ. ನಾನು ಹೇಳಿದ್ದನ್ನು ಮಾತ್ರ ಕೇಳಬೇಕು ಎಂದರೆ ಆತ ನಿಜವಾದ ಗುರುವೂ ಅಲ್ಲ, ಹಾಗೆ ಕೇಳಿದರೆ ಆತ ಶಿಷ್ಯನೂ ಅಲ್ಲ. ಶಿಷ್ಯ ಪ್ರಶ್ನೆಗಳನ್ನು ಕೇಳಬೇಕು, ಗುರು ತಾಳ್ಮೆಯಿಂದ ಉತ್ತರ ನೀಡಬೇಕು. ಗ ಗುರುಶಿಷ್ಯರ ಬಾಂಧವ್ಯಕ್ಕೆ, ಸಂಬಂಧಕ್ಕೆ ವಿಶೇಷ ಗೌರವ ಬರುವುದು. ಸಾವಿರಾರು ಸೂರ್ಯ ಚಂದ್ರರು ಹುಟ್ಟಿಬಂದರೂ ಹೃದಯದ ಒಳಗಿನ ಕತ್ತಲೆಯನ್ನು ಹೋಗಲಾಡಿಸಲು ಕೇವಲ ಗುರುವಿನ ಅನುಗ್ರಹದಿಂದ ಮಾತ್ರ ಸಾಧ್ಯವಾಗುವುದು
ಶಾಲೆಯ ಪಾಠಕ್ಕಿಂತ ಜೀವನ ಪಾಠ ದೊಡ್ಡದು. ಜೀವನದಲ್ಲಿ ಬರುವ ಪರಿಸ್ಥಿತಿಗಳೆಂಬ ಗುರುಗಳು ಹೇಗೆ ಬದುಕಬೇಕೆಂಬುದನ್ನು ಕಲಿಸಿಕೊಡುತ್ತವೆ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು, ಮೇಟಿ ವಿದ್ಯೆಯಿಂದ ರಾಟಿ ನಡೆದುದಲ್ಲದೇ ದೇಶ ದಾಟವೇ ಕೆಡಗು ಸರ್ವಜ್ಞ...
ಆಶಾ ಎಲ್ ಎಸ್, ಶಿವಮೊಗ್ಗ
Tags:
ಕವನ