ವಿಜಯ ಸಂಘರ್ಷ
ಭದ್ರಾವತಿ: ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಕಚೇರಿ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಇವರ ಸಹಯೋಗದಲ್ಲಿ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರು, ಉರ್ದು ಶಾಲೆಗಳಲ್ಲಿ ಕನ್ನಡ ಶಿಕ್ಷಕರಿಗೆ ಪಠ್ಯವನ್ನು ಆಧರಿಸಿದ ಸಾಹಿತ್ಯ ರಸಗ್ರಹಣ ಶಿಬಿರ ಏರ್ಪಡಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಸುಧಾಮಣಿ ತಿಳಿಸಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿರುವ ಅವರು ಜು: 6 ಮತ್ತು7 ಗುರುವಾರ, ಶುಕ್ರವಾರ ಎಸ್.ಎ.ವಿ. ಶಿಕ್ಷಣ ಸಂಸ್ಥೆ ಆವರಣದಲ್ಲಿ ಶಿಬಿರ ನಡೆಯಲಿರುವ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿಗಳು, ಶಿವಮೊಗ್ಗ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಸಾನಿಧ್ಯವಹಿಸಲಿದ್ದಾರೆ.
ಶಾಸಕ ಬಿ. ಕೆ. ಸಂಗಮೇಶ್ವರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವೇದಿಕೆಯ ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿಗಳು, ವಿಶ್ರಾಂತ ಪ್ರಾಧ್ಯಾಪಕ ಡಾ. ಕುಮಾರಚಲ್ಯ ಆಧುನಿಕ ಕಾವ್ಯಗಳು, ಅವುಗಳನ್ನು ಪಾಠಮಾಡುವ ಕ್ರಮಗಳ ಕುರಿತು ಮಾತನಾಡಲಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ಧಬಸಪ್ಪ, ಕಸಾಪ ಅಧ್ಯಕ್ಷ ಕೋಡ್ಲುಯಜ್ಞಯ್ಯ, ಪ್ರಮುಖರಾದ ವಿ. ಜಗದೀಶ್, ಪ್ರಶಾಂತ ಸಣ್ಣಕ್ಕಿ ಮತ್ತಿತರರು ಭಾಗವಹಿಸಲಿದ್ದಾರೆ.
ವಿಶ್ರಾಂತ ಪ್ರಿನ್ಸಿಪಾಲರು, ಸಾಹಿತಿಗಳಾದ ಡಾ.ಬಿ.ಎಂ.ಜಯಶೀಲಾ ಅವರು ಪ್ರಾಚೀನ ಕಾವ್ಯ ಓದು-ವಿಶ್ಲೇಷಣೆ ಕುರಿತು, ಹಳೆಗನ್ನಡ, ನಡುಗನ್ನಡ, ಗಮಕ ಓದು ಲಲಿತಮ್ಮ ವಿಠಲದಾಸ್ ರವರು ನಡೆಸಿಕೊಡಲಿದ್ದಾರೆ.
ಹಿರಿಯ ಸಾಹಿತಿ ಡಾ.ಶಾಂತಾರಾಮ್ ಪ್ರಭು ಅವರು ಭಾಷೆ-ವ್ಯಾಕರಣ ಕುರಿತು ಮಾತನಾಡಲಿದ್ದಾರೆ. ವಿಶ್ರಾಂತ ಪ್ರಿನ್ಸಿಪಾಲರು, ಚಿಂತಕ ಡಾ.ಎಚ್.ಟಿ. ಕೃಷ್ಣಮೂರ್ತಿ ಅವರು ಕಾವ್ಯ ಮಿಮಾಂಸೆ - ಶೋಧನೆ ಕುರಿತು ಮಾಹಿತಿ ನೀಡಲಿದ್ದಾರೆ.
ಜುಲೈ 7 ರಂದು ಶುಕ್ರವಾರ ಬೆಳಿಗ್ಗೆ 10 ಕ್ಕೆ ಕನ್ನಡ ಪಠ್ಯದಲ್ಲಿರುವ ಕಥೆ-ಪ್ರಬಂಧ ಗಳನ್ನು ಓದುವ, ವಿಶ್ಲೇಷಣೆ ಮಾಡುವ ಬಗೆಯನ್ನು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಚಂದ್ರ ಶೇಖರಯ್ಯ ವಿವರಿಸುವರು. ವಚನ ಸಾಹಿತ್ಯ ಹಿರಿಮೆ ಕುರಿತು ಕಸ್ತೂರಿಬಾ ಬಾಲಿಕಾ ಪ್ರೌಢಶಾಲಾ ಶಿಕ್ಷಕರಾದ ಡಾ. ಬಿ.ಎಸ್. ತಂಬೂಳಿ ಅವರು ಮಾತನಾಡಲಿದ್ದಾರೆ. ಜನಪದ ಸಾಹಿತ್ಯ ಕುರಿತು ಡಾ. ಎಸ್. ಎಂ. ಮುತ್ತಯ್ಯ ಮಾತನಾಡುವರು. ಭಾಷಾ ಕೌಶಲ್ಯ-ಮಹತ್ವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಎ. ಕೆ. ನಾಗೇಂದ್ರಪ್ಪ ಮಾತನಾಡುವರು. ಪಠ್ಯದಲ್ಲಿರುವ ನಾಟಕ ಕುರಿತು ಓದು, ಪ್ರದರ್ಶನ ಕುರಿತು ಉಪ ನ್ಯಾಸಕರು, ರಂಗನಿರ್ದೇಶಕರಾದ ಡಾ. ಜಿ. ಆರ್. ಲವ ಅವರು ಭಾಗವಹಿಸಲಿದ್ದಾರೆ.
ಸರ್ಕಾರಿ, ಅನುದಾನ, ಅನುದಾನ ರಹಿತ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರು, ಉರ್ದು ಶಾಲೆಗಳ ಕನ್ನಡ ಭಾಷಾ ಶಿಕ್ಷಕರು ಭಾಗವಹಿಸಿ ಶಿಬಿರದ ಸದುಪಯೋಗ ಪಡೆದು ಕೊಳ್ಳಲು ಕೋರಲಾಗಿದೆ. ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಲು, ಫಲಿತಾಂಶದಲ್ಲಿ ಪ್ರಗತಿ ಕಾಣುವ ಉದ್ದೇಶದಿಂದ ಸಾಹಿತ್ಯ ರಸಗ್ರಹಣ ಶಿಬಿರ ಏರ್ಪಡಿಸಲಾಗಿದೆ ಎಂದು ಸುಧಾಮಣಿ ತಿಳಿಸಿದ್ದಾರೆ
Tags:
ಸಾಂಸ್ಕೃತಿಕ ವೇದಿಕೆ ಸುದ್ದಿ