ಉದ್ಯಮದ ಜತೆಯಲ್ಲಿ ಸೇವಾ ಕಾರ್ಯವು ಅತ್ಯಂತ ಮುಖ್ಯ

ವಿಜಯ ಸಂಘರ್ಷ
ಶಿವಮೊಗ್ಗ: ಯುವ ಉದ್ಯಮಿಗಳು ತಮ್ಮ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆ ಸುವ ಜೊತೆಗೆ ಸಮಾಜದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾಸಂಘದ ಸಭಾಂಗಣದಲ್ಲಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಎಫ್‌ಕೆಸಿಸಿಐ ನೂತನ ವ್ಯವಸ್ಥಾಪಕ ಸಮಿತಿ ಸದಸ್ಯರಾಗಿ ನೇಮಕ ಗೊಂಡ ಡಿ.ಎಂ.ಶಂಕರಪ್ಪ ಅವರಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ಯುವ ಉದ್ಯಮಿ ಗಳಿಗೆ ಹೆಚ್ಚಿನ ಅವಕಾಶ ಇದ್ದು, ಪರಿಣಾಮ ಕಾರಿಯಾಗಿ ಬಳಸಿಕೊಂಡು ಹಂತ ಹಂತವಾಗಿ ಬೆಳೆಯಬೇಕು. ಸಂಸ್ಥೆ ಪ್ರಗತಿ ಹೊಂದುವ ಜತೆಯಲ್ಲಿ ಸಮಾಜದ ಬೆಳವಣಿಗೆಯಲ್ಲಿ ಪಾಲ್ಗೊಳ್ಳಬೇಕು. ಸಮಾಜಮುಖಿ ಕಾರ್ಯಗಳಲ್ಲಿ ಯುವ ಉದ್ಯಮಿಗಳನ್ನು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.

ಜಿಲ್ಲೆಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಈಗಾಗಲೇ ಹಿರಿಯ ಅಧ್ಯಕ್ಷರ ಕೊಡುಗೆಯಿಂದ ರಾಜ್ಯದಲ್ಲಿಯೇ ಮಾದರಿ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಸ್ಕಿಲ್ ಅಕಾಡೆಮಿ ಆರಂಭ ಮಾಡಲು ಮುಂದಾಗಿರುವುದು ಶ್ಲಾಘನೀಯ ಎಂದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಡಿ.ಎಂ.ಶಂಕರಪ್ಪ ಅವರು ಅನೇಕ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ವಾಣಿಜ್ಯಸಂಘದಲ್ಲಿ ಉನ್ನತ ಸ್ಥಾನ ತಲುಪಿ ಸಮರ್ಥವಾಗಿ ಸೇವಾ ಕಾರ್ಯ ನಡೆಸುವಂತಾಗಲಿ ಎಂದು ಶುಭ ಕೋರಿದರು.

ಎನ್.ಗೋಪಿನಾಥ್ ಮಾತನಾಡಿ ಶಂಕರಪ್ಪ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನ ತಲುಪುವಂತಾಗಲಿ ಎಂದು ಆಶಿಸಿದರು.
ಸಂಘದ ಮಾಜಿ ಅಧ್ಯಕ್ಷ ಟಿ.ಆರ್.ಅಶ್ವತ್ಥ್ ನಾರಾಯಣಶೆಟ್ಟಿ, ಕೆ.ವಿ.ವಸಂತ್‌ ಕುಮಾರ್, ಜೆ.ಆರ್.ವಾಸುದೇವ್, ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಡಿ.ಎಂ.ಶಂಕರಪ್ಪ ಅವರಿಗೆ ಅಭಿನಂದಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು