ವಿಶೇಷಚೇತನ ಮಕ್ಕಳಿಗೆ ಸಲಕರಣೆ ವಿತರಣೆ

ವಿಜಯ ಸಂಘರ್ಷ
ಭದ್ರಾವತಿ: ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ 2023-24ನೇ ಸಾಲಿನ ಗೃಹದಾರಿತ ಮಕ್ಕಳ ಪೋಷಕರ ಸಭೆ ಮತ್ತು ಆಲಿಂಕೋ ಸಂಸ್ಥೆಯಿಂದ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮ ನಡೆಸಲಾಯಿತು.
ನಗರದ ನ್ಯೂಟೌನ್ ಶ್ರೀ ಸತ್ಯ ಸಾಯಿಬಾಬ ಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವೈದ್ಯಕೀಯ ತಪಾಸಣೆ ಯಲ್ಲಿ ಶಿಫಾರಸ್ಸು ಮಾಡಿದ ವಿಶೇಷ ಅಗತ್ಯವುಳ್ಳ 45 ಮಕ್ಕಳಿಗೆ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಬಿ.ಕೆ.ಜಗನ್ನಾಥ್ ಮಾತನಾಡಿ, ವಿಶೇಷ ಚೇತನ ಮಕ್ಕಳು ದೇವರ ಸೃಷ್ಠಿ. ಆದ್ದರಿಂದ ಪೋಷಕರು ಹಿಂಜರಿಯಬೇಕಿಲ್ಲ. ಇಂತಹ ಕಾರ್ಯಕ್ರಮಗಳು ಪೋಷಕರಿಗೆ ಬಹಳಷ್ಟು ಶಕ್ತಿತುಂಬಲಿದೆ ಎಂದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಮಾತನಾಡಿ, ತಾವು ಹಾಗು ಲಯನ್ಸ್ ಸಂಸ್ಥೆ ಸಹಕಾರದೊಂದಿಗೆ ಆಸಕ್ತ ಮಕ್ಕಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ಕೊಡಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗದ ಮಾನಸ ಆಸ್ಪತ್ರೆಯ ವೈದ್ಯರಾದ ಡಾ|| ರಾಧಿಕಾ, ಡಾ||.ಗಣೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ನಾಗೇಂದ್ರಪ್ಪ, ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಪ್ರಭಾಕರ್ ಬೀರಯ್ಯ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ದಬಸಪ್ಪ, ದಲಿತ ನೌಕರರ ಒಕ್ಕೂಟದ ಅಧ್ಯಕ್ಷೆ ಉಮಾ, ಸಕ್ಷಮ ಸಂಸ್ಥೆಯ ಜಿಲ್ಲಾ ಸಂಚಾಲಕ ಸಿ.ಆರ್.ಶಿವಕುಮಾರ್ ಸೇರಿದಂತೆ ಅನೇಕರು ಹಾಜರಿದ್ದರು.

ವಿದ್ಯಾರ್ಥಿನಿ ಭಾವನ ಪ್ರಾರ್ಥಿಸಿದರು. ಪಂಚಾಕ್ಷರಿ ಹೆಚ್ ಸ್ವಾಗತಿಸಿದರು. ಡಿ.ಎಚ್.ತೀರ್ಥಪ್ಪ ನಿರೂಪಿಸಿ, ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು