ವಿಜಯ ಸಂಘರ್ಷ
ಭದ್ರಾವತಿ: ನಗರಸಭೆ ವತಿಯಿಂದ ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಜಿ+3 ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲು ಉಂಟಾಗಿದ್ದ ಜಾಗದ ಸಮಸ್ಯೆಯನ್ನು ಗುರುವಾರ ಅಧಿಕಾರಿಗಳ ತಂಡ ಬಗೆಹರಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಬೊಮ್ಮನಕಟ್ಟೆ ಸಮೀಪದ ನಂಜಾಪುರ ಗ್ರಾಮಕ್ಕೆ ಹೊಂದಿಕೊಂಡ ಬುಳ್ಳಾಪುರ ಗ್ರಾಮದ ಒಟ್ಟು 16 ಎಕರೆಯನ್ನು ಭದ್ರಾವತಿ ನಗರಸಭೆ ಹೆಸರಿಗೆ ಮಂಜೂರಾತಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ಶಾಸಕ ಬಿ.ಕೆ ಸಂಗಮೇಶ್ವರ್ ಗುದ್ದಲಿ ಪೂಜೆ ನೆರವೇರಿಸಲು ಈ ಹಿಂದೆ ಮುಂದಾಗಿದ್ದರು. ಆದರೆ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ನಂಜಾಪುರ ನಿವಾಸಿಗಳು ವಿರೋಧ ವ್ಯಕ್ತ ಪಡಿಸಿದ್ದರು. ಫಲಾನುಭವಿಗಳನ್ನು ಗುರುತಿಸಿ ಎಲ್ಲ ಪ್ರಕ್ರಿಯೆಗಳು ಮುಕ್ತಾಯಗೊಂಡಿದ್ದರೂ ಜಾಗದ ಸಮಸ್ಯೆಯಿಂದಾಗಿ ಇನ್ನೂ ಕಾರ್ಯರೂಪಕ್ಕೆ ಬಂದಿರಲಿಲ್ಲ.
ಗುರುವಾರ ಬೆಳಿಗ್ಗೆ ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ನೇತೃತ್ವದ ತಂಡ ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸರ್ವೆ ನಡೆಸಿ ಜೆಸಿಬಿ ಯಂತ್ರ ಬಳಸಿ ಗಿಡಗಳನ್ನು ತೆರವು ಮಾಡಿ ಫಲಕ ಅಳವಡಿಸಿತು. ಕಾರ್ಯಾಚರಣೆಯಲ್ಲಿ ತಹಸೀಲ್ದಾರ್ ಕೆ.ಆರ್ ನಾಗರಾಜ್, ಪೌರಾಯುಕ್ತ ಎಚ್.ಎಂ ಮನುಕುಮಾರ್ ಹಾಗು ನಗರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದರು. ಕಾರ್ಯಾಚರಣೆ ಬಳಿಕ ಅಧಿಕಾರಿಗಳು ಗ್ರಾಮಸ್ಥ ರೊಂದಿಗೆ ಸಭೆ ನಡೆಸಿದರು. ಪ್ರಗತಿಪರ ಮುಖಂಡ ಸುರೇಶ್, ಬಿಜೆಪಿ ಮುಖಂಡ ಮಂಗೋಟೆ ರುದ್ರೇಶ್, ಸೇರಿ ಇತರರಿದ್ದರು.
Tags:
ಜಿ+3 ವಸತಿ ಯೋಜನೆ ಸುದ್ದಿ