ವಿಜಯ ಸಂಘರ್ಷ
ಶಿವಮೊಗ್ಗ: ಸೇವಾ ಕಾರ್ಯವು ಸಮಾಜದ ಅರ್ಹರಿಗೆ ತಲುಪುವುದು ಅಗತ್ಯವಿದ್ದು, ಶಾಲಾ ವಿದ್ಯಾರ್ಥಿಗಳು ಸಾಮಾಜಿಕ ಸೇವೆ ಮಾಡಲು ಮುಂದಾಗಿರುವುದು ಅಭಿನಂದನೀಯ ಕೆಲಸ ಎಂದು ಜ್ಞಾನದೀಪ ಸಿನಿಯರ್ ಸೆಕಂಡರಿ ಶಾಲೆಯ ಉಪ ಪ್ರಾಚಾರ್ಯೆ ವಾಣಿ ಕೃಷ್ಣಪ್ರಸಾದ್ ಹೇಳಿದರು.
ಶಿವಮೊಗ್ಗ ನಗರದ ಗುಡ್‌ಲಕ್ ಆರೈಕೆ ಕೇಂದ್ರದಲ್ಲಿ ಅಗತ್ಯ ವಸ್ತುಗಳನ್ನು ದೇಣಿಗೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ವಿದ್ಯಾರ್ಥಿಗಳು ಇಂತಹ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಗಮನಾರ್ಹವಾದ ಸಹಾನುಭೂತಿ ಮತ್ತು ಜವಾಬ್ದಾರಿಯನ್ನು ತೋರಿಸಿದ್ದಾರೆ ಎಂದು ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ದಯೆಯ ಸೇವಾ ಕಾರ್ಯಗಳು ಸಹ ಅಗತ್ಯವಿರುವವರ ಜೀವನದ ಮೇಲೆ ಆಳವಾದ ಪ್ರಭಾವವನ್ನು ಬೀರಬಹುದು ಎಂಬುದನ್ನು ನೆನಪಿಸುವ ಸೇವಾ ಕಾರ್ಯ ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದು ಉಜ್ವಲ ಉದಾಹರಣೆಯಾಗಿದೆ ಎಂಬುದಕ್ಕೆ ಜ್ಞಾನದೀಪ ಶಾಲೆ ಸಾಕ್ಷಿಯಾಗಿದೆ ಎಂದರು.
ಜಾವಳ್ಳಿಯ ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಕೂಲ್ ವಿದ್ಯಾರ್ಥಿಗಳು ಅಧ್ಯಾಪಕರೊಂದಿಗೆ ಒಗ್ಗೂಡಿ ಶಿವಮೊಗ್ಗದ ‘ಗುಡ್ ಲಂಕ್ ಆರೈಕೆ ಕೇಂದ್ರ’ದ ವೃದ್ಧರಿಗೆ ಸೀಲಿಂಗ್ ಫ್ಯಾನ್ ಗಳನ್ನು ಕೊಡುಗೆಯಾಗಿ ನೀಡಿದರು. 8ನೇ ತರಗತಿಯ ಅನಘಾ ಜಿ ಮತ್ತು ಸಂಹಿತ್ ಆರ್ ಪ್ರೇರಣೆಯ ನುಡಿಗಳನ್ನು ಹಂಚಿಕೊಂಡರು.
2023 ರ ಸೆಪ್ಟೆಂಬರ್ 24 ರಂದು ಶಾಲೆಯಲ್ಲಿ ನಡೆದ ಕ್ಯಾಲೋರಿ ಕ್ಯೂಸಿನ್ ಸ್ಪರ್ಧೆಯಲ್ಲಿ ದೇಣಿಗೆಯು ಸಂಗ್ರಹ ಆಗಿತ್ತು. ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 8 ನೇ ತರಗತಿಯ ಯುವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಪೌಷ್ಟಿಕಾಂಶದ ಬಗ್ಗೆ ತಮ್ಮ ಪೋಷಕರಿಗೆ ತಿಳಿಸಿ ಅವರಿಂದ ದೇಣಿಗೆ ಸಂಗ್ರಹಿಸಿದ್ದರು. ಅದರಿಂದ 13 ಸೀಲಿಂಗ್ ಫ್ಯಾನ್‌ಗಳು ಮತ್ತು 5 ಸ್ಟ್ಯಾಂಡಿಂಗ್ ಫ್ಯಾನ್‌ಗಳನ್ನು ಕೇಂದ್ರಕ್ಕೆ ನೀಡಿದರು.
ವಿವಿಧ ರಾಜ್ಯಗಳ ಆಹಾರ ಪದಾರ್ಥಗಳನ್ನು ತಯಾರು ಮಾಡಿ ಪೋಷಕರಿಗೆ ಮಾರಿ ಬಂದAತಹ 35 ಸಾವಿರ ರೂ. ಹಣದಿಂದ ಮಕ್ಕಳು ವಿಶೇಷ ಸೇವಾ ಕಾರ್ಯವನ್ನು ಮಾಡಿದ್ದಾರೆ.
ರೋಟರಿಯನ್ ಕೃಷ್ಣಪ್ರಸಾದ್ ಶೆಟ್ಟಿ, ಆರೈಕೆ ಕೇಂದ್ರದ ಅಧ್ಯಕ್ಷ ಯು.ರವೀಂದ್ರನಾಥ್ ಐತಾಳ್, ನಿರ್ದೇಶಕರಾದ ಜಿ.ಎಸ್.ನಟೇಶ್, ಕಲೋನಿಲ್ ಆನಂದರಾವ್, ಅನುಪಮಾ ಹೆಗ್ಡೆ, ಜಿ.ವಿಜಯ್ ಕುಮಾರ್, ಶಿವಪ್ಪಗೌಡ, ಪ್ರಾಧ್ಯಾಪಕರು ಮಕ್ಕಳು ಉಪಸ್ಥಿತರಿದ್ದರು.
Tags:
ಶಿವಮೊಗ್ಗ ರೋಟರಿ ನ್ಯೂಸ್