ವಿಜಯ ಸಂಘರ್ಷ
ಭದ್ರಾವತಿ: ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಬುಧವಾರ ನಗರದ ಪ್ರಧಾನ ಅಂಚೆ ಕಚೇರಿ ಮುಂಭಾಗ ಒಂದು ಸಾಂಕೇತಿಕವಾಗಿ ಮುಷ್ಕರ ನಡೆಸಲಾಯಿತು.
ವಲಯ ರಾಜ್ಯಾಧ್ಯಕ್ಷ ಎಚ್.ವಿ ರಾಜ್ ಕುಮಾರ್ ಮಾತನಾಡಿ, ಈಗಾಗಲೇ 7ನೇ ವೇತನ ಆಯೋಗದ ಕಮಲೇಶ್ ಚಂದ್ರ ವರದಿ ಪ್ರಕಾರ ಅಂಚೆ ನೌಕರರಿಗೆ ಹಲವಾರು ಶಿಫಾರಸ್ಸುಗಳನ್ನು ಮಾಡಲಾಗಿದೆ. ಆದರೆ ಶಿಫಾರಸ್ಸುಗಳನ್ನು ಇಲಾಖೆ ಅಥವಾ ಸರ್ಕಾರ ಇದುವರೆಗೂ ಯಥಾವತ್ತಾಗಿ ಅನುಮೋದನೆ ಮಾಡಿಲ್ಲ. ಇದರಿಂದಾಗಿ ನೌಕರರು ಸಮಸ್ಯೆ ಎದುರಿಸುವಂತಾಗಿರುವುದರಿಂದ ಹೋರಾಟ ಅನಿವಾರ್ಯವಾಗಿದೆ ಎಂದರು.
8 ಗಂಟೆಗಳ ಕೆಲಸ ನೀಡುವುದು ಮತ್ತು ಪಿಂಚಣಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕು. ಸೇವಾ ಹಿರಿತನದ ಆಧಾರದ ಮೇಲೆ 12-14-36 ಸೇವೆ ಸಲ್ಲಿಸಿದ ಜಿಎಸ್ ಡಿ ನೌಕರರಿಗೆ ವಿಶೇಷ ಇನ್ ಕ್ರೀಮೆಂಟ್ ನೀಡಬೇಕು. ಗ್ರೂಪ್ ಇನ್ಸೂರೆನ್ಸ್ ಕವರೇಜ್ ರು.5 ಲಕ್ಷದವರೆಗೆ ಹೆಚ್ಚಿಸಬೇಕು. ಅವೈಜ್ಞಾನಿಕ ಗುರಿ ಸಾಧಿಸದಿರುವ ಜಿಡಿಎಸ್ ನೌಕರರಿಗೆ ನೀಡುತ್ತಿರುವ ಕಿರುಕುಳವನ್ನು ನಿಲ್ಲಿಸಬೇಕು. ಜಿಡಿಎಸ್ ಗ್ರಾಚ್ಯುಟಿ ಹಣ ರು. 5 ಲಕ್ಷಗಳವರೆಗೆ ಹೆಚ್ಚಿಸಬೇಕು. 180 ದಿನಗಳ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಹಾಗು ಜಿಡಿಎಸ್ ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಹಲವಾರು ಬಾರಿ ಹೋರಾಟ ನಡೆಸಲಾಗಿದೆ. ಇದುವರೆಗೂ ಬೇಡಿಕೆ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ತಕ್ಷಣ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಡಿ.12ರಿಂದ ವಿಭಾಗೀಯ ಕಚೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷ ಜವರೇಗೌಡ್ರು, ಸಂಘಟನಾ ಕಾರ್ಯದರ್ಶಿ ಕೆ. ಮಂಜುನಾಥ್, ಸಂಗಮೇಶ್ ಆಚಾರ್, ಶ್ರೀಲಕ್ಷ್ಮೀ, ಸರಸ್ವತಿ, ಲಿಂಗರಾಜ್, ವೆಂಕಟರಮಣ, ಚೇತನ ಸೇರಿದಂತೆ ಇನ್ನಿತರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
Tags:
ಪೋಸ್ಟಲ್ ಇಲಾಖೆಯ ಪ್ರತಿಭಟನೆ