ವಿಜಯ ಸಂಘರ್ಷ
ಶಿವಮೊಗ್ಗ: ಜನಸಂಖ್ಯೆ ಹೆಚ್ಚಿದಂತೆ ವಾಹನಗಳ ಸಂಖ್ಯೆಯು ಹೆಚ್ಚುತ್ತಿದ್ದು, ಇತ್ತೀಚಿನ ದಿನಗಳಲ್ಲಿ ವಾಹನಗಳನ್ನು ಸರಿಯಾದ ರೀತಿ ಚಾಲನೆ ಮಾಡದಿರುವುದು ರಸ್ತೆ ಅಪಘಾತಗಳಿಗೆ ಹೆಚ್ಚು ಕಾರಣವಾಗಿದೆ. ಸುರಕ್ಷಿತ ವಾಹನ ಚಾಲನೆಯು ಪ್ರತಿಯೊಬ್ಬರ ಜವಾಬ್ದಾರಿ ಎಂದು ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಶಿವಮೊಗ್ಗ ನಗರದ ಉಂಬ್ಳೆಬೈಲು ರಸ್ತೆಯಲ್ಲಿ ರಸ್ತೆ ಸುರಕ್ಷತೆ ಹಾಗೂ ವಾಹನ ಚಾಲನೆ ಬಗ್ಗೆ ಜಾಗೃತಿ ಮೂಡಿಸುವ ನಾಮಫಲಕ ಉದ್ಘಾಟಿಸಿ ಮಾತನಾಡಿ, ಸುರಕ್ಷಿತ ವಾಹನ ಚಾಲನೆ ಮಾಡುವುದರಿಂದ ಅಪಘಾತ ಪ್ರಕರಣಗಳನ್ನು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.
ರಸ್ತೆಯಲ್ಲಿ ಬೇಕಾಬಿಟ್ಟಿ ಚಾಲನೆ ಮಾಡುವುದು, ಮದ್ಯಪಾನ ಸೇವಿಸಿ ಚಾಲನೆ ಮಾಡುವುದು. ತರಬೇತಿ ಹಾಗೂ ಪರವಾನಿಗೆ ಇಲ್ಲದೆ ಚಾಲನೆ ಮಾಡುವುದು ರಸ್ತೆ ಅಪಘಾತಕ್ಕೆ ಕಾರಣವಾಗಿದೆ. ರೋಟರಿ ಸಂಸ್ಥೆಯು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷಿತ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಶಾಲಾ ಕಾಲೇಜುಗಳಲ್ಲಿ ಸಂಘ ಸಂಸ್ಥೆಗಳಲ್ಲಿ ಸಂಚಾರಿ ಪೊಲೀಸ್ ಸಹಾಯದಿಂದ ಹಾಗೂ ಪ್ರಮುಖ ಸ್ಥಳಗಳಲ್ಲಿ ನಾಮಫಲಕ ಅಳವಡಿಸುವುದರ ಮುಖಾಂತರ ಜಾಗೃತಿ ನಡೆಸಲಾಗುತ್ತಿದೆ ಎಂದರು.
ರೋಟರಿ ಪೂರ್ವ ಸಂಸ್ಥೆಯವರುಅನೇಕ ಸ್ಥಳದಲ್ಲಿ ಜಾಗೃತಿ ಮೂಡಿಸುವ ರೇಡಿಯಮ್ ಇರುವ ದೊಡ್ಡ ನಾಮಫಲಕವನ್ನು ಅಳವಡಿಸುತ್ತಿರುವುದು, ನಾಮಫಲಕವನ್ನು ನೆಪ್ಚೂನ್ ಆಟೋ ವರ್ಕ್ ಸಹಕಾರದಲ್ಲಿ ಅಳವಡಿಸುತ್ತಿರುವುದು ಅತ್ಯುತ್ತಮ ಕಾರ್ಯ, ಸಾರ್ವಜನಿಕರು ಕಡ್ಡಾಯವಾಗಿ ರಸ್ತೆ ನಿಯಮಗಳನ್ನು ಪಾಲಿಸಬೇಕು ಎಂದರು.
ಸಹಾಯಕ ಗವರ್ನರ್ ರವಿ ಕೊಟೋಜಿ ಮಾತನಾಡಿ, ಈ ವರ್ಷ ರೋಟರಿಯ ಜಿಲ್ಲಾ ಯೋಜನೆಗಳಲ್ಲಿ ಪ್ರಮುಖವಾದ ಒಂದು ಯೋಜನೆ ರಸ್ತೆ ಸುರಕ್ಷತೆ. ಈಗಾಗಲೇ ಎಲ್ಲಾ ರೋಟರಿ ಕ್ಲಬ್ ಗಳಲ್ಲಿ ಕಾರ್ಯಕ್ರಮಗಳ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೋನಲ್ ಲೆಫ್ಟಿನೆಂಟ್ ಧರ್ಮೇಂದ್ರ ಸಿಂಗ್ ಬಂಟಿ, ಮಾಜಿ ಸಹಾಯಕ ಗವರ್ನರ್
ಜಿ.ವಿಜಯಕುಮಾರ್, ವಸಂತ ಹೋಬಳಿ ದಾರ್, ವಲಯ ತರಬೇತುದಾರ
ಡಾ.ಗುಡದಪ್ಪ ಕಸಬಿ, ಶ್ರೀಕಾಂತ್ ಮಹೇಶ್, ಕಾರ್ಯದರ್ಶಿ ಕಿಶೋರ್ ಕುಮಾರ್, ನಿರ್ದೇಶಕ ಸಿ ಕೆ ವಿಜಯಕುಮಾರ್, ಸಂತೋಷ್, ಕುಮಾರಸ್ವಾಮಿ, ಮಂಜುನಾಥ್, ದಿವ್ಯ ಪ್ರವೀಣ್ ಹಾಗೂ ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
Tags:
ಶಿವಮೊಗ್ಗ ರೋಟರಿ ನ್ಯೂಸ್