ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ನಗರಸಭೆಯಲ್ಲಿ ತೀರ್ಮಾನ

ವಿಜಯ ಸಂಘರ್ಷ
ಭದ್ರಾವತಿ: ನಗರಸಭೆ ಕಾಮಗಾರಿಗಳ ವಿಳಂಬಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ನಗರಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ನಗರಸಭೆಯಲ್ಲಿ ಗುರುವಾರದಂದು ನಡೆದ ಅಮೃತ ನಗರೋತ್ಥಾನ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಣಯ ಪ್ರಕಟಿಸಲಾಯಿತು.

ನಗರಸಭೆ ಸದಸ್ಯ ಬಿ.ಕೆ.ಮೋಹನ್ ಸೇರಿದಂತೆ ಹಲವು ಸದಸ್ಯರು ಕಾಮಗಾರಿಗಳ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಕೆಲವು ಗುತ್ತಿದಾರರು ಗುತ್ತಿಗೆಪಡೆದು ಕಾಮಗಾರಿ ಆರಂಭಿಸದಿರುವುದು ಕಂಡುಬಂದಿತು. ಇಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಅಮೃತ ನಗರೋತ್ಥಾನ ಯೋಜನೆಯ ಬಗ್ಗೆ ಮಾಹಿತಿ ನೀಡಿದ ಕಾರ್ಯಪಾಲಕ ಅಭಿಯಂತರ ವಹೀದಾ ಬೇಗಂ, 2023-24ರ ಅಮೃತ್ ನಗರೋತ್ಥಾನ ಯೋಜನೆ ಯಡಿ 3.38 ಕೋಟಿ ಅನುದಾನ ಮಂಜೂರಾಗಿದ್ದು, 1.60ಕೋಟಿ ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿರುವುದಾಗಿ ಮಾಹಿತಿ ನೀಡಿದರು.

ಅಧಿಕಾರಿಗಳ ಮಾಹಿತಿಗೆ ಪ್ರತಿಕ್ರಿಯಿಸಿದ ನಗರಸಭೆ ಸದಸ್ಯ ಬಿ.ಕೆ.ಮೋಹನ್, ಬೇರೆ ತಾಲ್ಲೂಕು ಗಳಲ್ಲಿ ಬೀದಿದೀಪಗಳ ಅಳವಡಿಕೆ ಉತ್ತಮವಾಗಿದೆ. ಆದರೆ ಭದ್ರಾವತಿ ಯಲ್ಲಿ ನಕ್ಷೆ ತಯಾರಿಕೆಯೇ ಅವೈಜ್ಞಾನಿಕವಾಗಿದೆ. ಝಡ್ ಮಾಧರಿ ಯಲ್ಲಿ ಬೀದಿದೀಪ ಅಳವಡಿಸುವ ಬದಲು ಒಂದೇ ಬದಿಯಲ್ಲಿ ಅಳವಡಿಸಿರುವುದು ನಗರದ ಅಂದವನ್ನು ಕೆಡಿಸಿದೆ ಎಂದು ಆರೋಪಿಸಿದರು.

ನಗರಸಭೆ ಸದಸ್ಯರ ಮಾತುಗಳನ್ನು ಆಲಿಸಿದ ಪೌರಾಯುಕ್ತ ಮನುಕುಮಾರ್, ಅಧಿಕಾರಿಗಳು ಜನಪ್ರತಿನಿಧಿಗಳಿಗೆ ದಿಕ್ಕುತಪ್ಪಿಸದೆ ಸರಿಯಾಗಿ ಮಾಹಿತಿ‌ನೀಡಿ. ನಮ್ಮ ಬಳಿ ಒಂದು ರೀತಿ ಹೇಳಿಕೆ, ಜನಪ್ರತಿನಿಧಿಗಳ ಬಳಿ ಒಂದು ರೀತಿ ಹೇಳಿಕೆ ನೀಡಬಾರದು. ಉತ್ತಮ ಕೆಲಸಗಾರರನ್ನು ನೇಮಿಸಿಕೊಂಡು ಕೆಲಸ ಬೇಗ ಮುಗಿಸುವಂತೆ ತಾಕೀತು ಮಾಡಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಶೃತಿ ವಸಂತ ಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸುದೀಪ್ ಕುಮಾರ್, ನಗರಸಭೆ ಸದಸ್ಯರಾದ ವಿ.ಕದಿರೇಶ್, ಬಿ.ಟಿ.ನಾಗರಾಜ್, ಲತಾ ಚಂದ್ರಶೇಖರ್, ಚೆನ್ನಪ್ಪ, ಮಣಿ, ಜಾರ್ಜ್, ಮೋಹನ್, ಉದಯ, ಟಿಪ್ಪು, ಕೋಟೇಶ್ವರ ರಾವ್, ಅನಿತಾ ಮಲ್ಲೇಶ್, ಪಲ್ಲವಿ, ಜಯಶೀಲ, ಅನುಪಮ ಚನ್ನೇಶ್ ಸೇರಿದಂತೆ ಹಲವರು ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು