ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ಆಗಮಿಸದ ವೈದ್ಯರು- ಸಿಬ್ಬಂದಿಗಳ ವಿರುದ್ಧ ಪ್ರತಿಭಟನೆ

ವಿಜಯ ಸಂಘರ್ಷ
ಭದ್ರಾವತಿ: ನಗರದ ಕಾಗದನಗರ ಸಮೀಪದ ಉಜ್ಜನಿಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವೈದ್ಯರು ಮತ್ತು ಸಿಬ್ಬಂದಿಗಳು ಆಸ್ಪತ್ರೆಗೆ ನಿಗದಿತ ಸಮಯಕ್ಕೆ ಆಗಮಿಸದಿರುವುದನ್ನು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್ ಗೌಡ ತೀವ್ರವಾಗಿ ಖಂಡಿಸಿದ್ದಾರೆ.

ಸೋಮವಾರ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ ತಾಲ್ಲೂಕು ವೈದ್ಯಾಧಿಕಾರಿಗಳು, ಸಮಯ ಪಾಲನೆ ಮಾಡದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಎಲ್ಲ ಸಿಬ್ಬಂದಿಗಳನ್ನು ಸೇವೆಯಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು.

ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಉತ್ತಮ ಕರ್ತವ್ಯ ನಿರ್ವಹಿಸುತ್ತಿರುವುದು ಸಂತಸ, ಆದರೆ ಸಕಾಲದಲ್ಲಿ ಬಾಗಿಲು ತೆರೆಯದೆ ರೋಗಿಗಳಿಗೆ ಅನಾನುಕೂಲ ಮಾಡುತ್ತಿರುವುದು ಖಂಡನೀಯ. ರೋಗಿಗಳ ಹಿತದೃಷ್ಟಿಯಿಂದ ಸರ್ಕಾರದ ಆದೇಶದ ಮೇರೆಗೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಔಷದೋಪಚಾರ ನೀಡಲು ಮುಂದಾಗಲಿ ಎಂದರು.

ಮಧುಮೇಹ, ರಕ್ತದೊತ್ತಡ ಸೇರಿದಂತೆ ಅನೇಕ ಕಾಯಿಲೆಗಳಿಗೆ ತುತ್ತಾದ ರೋಗಿಗಳು ಆಸ್ಪತ್ರೆ ಮುಂಭಾಗ ಕಾಯುತ್ತಿದ್ದರು ಸಮಯ ಮೀರಿ ಬರುವುದು ಖಂಡನೀಯ. ಅಲ್ಲದೆ ಆಸ್ಪತ್ರೆ ಹೊರಭಾಗದಲ್ಲಿ ರೋಗಿಗಳಿಗೆ ಕೂರಲು ಆಸನ ವ್ಯವಸ್ಥೆ ಇಲ್ಲ. ಮಳೆ, ಬಿಸಿಲಿನಲ್ಲಿ ನಿಲ್ಲಬೇಕಿದೆ. ಇದನ್ನು ಕಂಡು ಕಾಣದಂತೆ ಮೇಲಾಧಿಕಾರಿಗಳು ಗಮನ ಹರಿಸದಿರುವುದು ಸರಿಯಾದ ಕ್ರಮವಲ್ಲ ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ಸ್ಥಳೀಯ ಯುವಕರು ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು