ವಿಜಯ ಸಂಘರ್ಷ
ಭದ್ರಾವತಿ: ದಾರ್ಶನಿಕರ ಆದರ್ಶಗಳನ್ನು ಯುವಕರಿಗೆ ಪರಿಚಯಿಸುವುದೆ ಜಯಂತಿ ಆಚರಣೆಗಳ ಉದ್ದೇಶ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ತಿಳಿಸಿದರು.
ಗುರುವಾರ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ತಾಲ್ಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾನೀಯರ ಜಯಂತಿ ಕಾರ್ಯಕ್ರಮ ಗಳಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಪಾಲ್ಗೊಳ್ಳುವ ಮುಖಾಂತರ ಮಹಾನೀಯರ ಜೀವನದ ಪರಿಚಯವನ್ನು ತಿಳಿಯುವುದು ಮುಖ್ಯ ಎಂದರು.
ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಮಾತನಾಡಿ, ಕುಲ ಕುಲ ಕುಲವೆಂದು ಹೊಡೆದಾಡದಿರಿ ಎನ್ನುವ ಸಂದೇಶದ ಮೂಲಕ ಇಡೀ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಶ್ರೇಷ್ಠರು ಕನಕದಾಸರು. ದಾಸವಾಣಿಯ ಮೂಲಕ ಸಮಾನತೆ ಬೋಧಿಸಿದ ಇವರು ವಿಶ್ವಮಾನ್ಯರು ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಕಾಂತರಾಜು, ಮಂಜುಳಾ ಸುಬ್ಬಣ್ಣ, ಶಶಿಕಲಾ ನಾರಾಯಣಪ್ಪ, ಅನಿತಾ ಮಲ್ಲೇಶ್, ಶ್ರೇಯಸ್, ಚೆನ್ನಪ್ಪ, ಮಣಿ, ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಎಸ್.ಕುಮಾರ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ದಬಸಪ್ಪ, ಗ್ರೇಡ್-2 ತಹಶೀಲ್ದಾರ್ ರಂಗಮ್ಮ, ಕಾರ್ಯನಿರ್ವಹಣಾಧಿಕಾರಿ ಎಂ.ಗಂಗಣ್ಣ ಮತ್ತಿತರರಿದ್ದರು.
ವೇದಿಕೆಯ ಕಾರ್ಯಕ್ರಮಕ್ಕೂ ಮುನ್ನ ದಾಸಶ್ರೇಷ್ಠರ ಭಾವಚಿತ್ರ ಹೊತ್ತು
ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ,ರಂಗಪ್ಪ ವೃತ್ತದ ಮೂಲಕ ತಾಲ್ಲೂಕು ಪಂಚಾಯತ್ ಸಭಾಂಗಣದವರೆವಿಗೂ ಮೆರವಣಿಗೆ ನಡೆಯಿತು.