ಮುರುಘಾಮಠ ಕಂಚಿನ ದೀಪರಥೋತ್ಸವ:ಗಣ್ಯರಿಗೆ ಪ್ರಶಸ್ತಿ ಪ್ರದಾನ

ವಿಜಯ ಸಂಘರ್ಷ
ಸಾಗರ: ಆನಂದಪುರ ಪಟ್ಟಣಕ್ಕೆ ಸಮೀಪದ ಮುರುಘಾಮಠದಲ್ಲಿ ಕಂಚಿನ ದೀಪರಥೋತ್ಸವ ನಾಳೆ ಜರುಗಲಿದೆ. ಈ ಸಂದರ್ಭದಲ್ಲಿ ಕಲಾ ಪ್ರದರ್ಶನ, ಆರೋಗ್ಯ ತಪಾಸಣಾ ಶಿಬಿರ, ಸಾಂಸ್ಕೃತಿಕ ವೈಭವ, ಶಿವಾನುಭವ ಗೋಷ್ಠಿ, ಶರಣ ಸಾಹಿತ್ಯ ಮತ್ತು ಭಾವೈಕ್ಯ ಸಮ್ಮೇಳನ, ಉಪನ್ಯಾಸ, ಕೆಳದಿರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ, ಅನ್ನದಾಸೋಹ ನಡೆಯಲಿದೆ.

ಸಾರ್ವಜನಿಕರು ಆಗಮಿಸಬೇಕಾಗಿ ಡಾ.ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಸ್ವಾಮಿಗಳು ಕರೆ ನೀಡಿದ್ದಾರೆ.ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬೆಳಿಗ್ಗೆ 9ಗಂಟೆಗೆ ಶತರುದ್ರಾಭಿಷೇಕ, ಷಟಸ್ಥಲ ಧ್ವಜಾರೋಹಣ, ಡಾ.ನಾಗೇಶ್ ಸುವರ್ಣಕವಿ ಆಯುರ್ವೇದ ಆಸ್ಪತ್ರೆ, ಸರ್ಜಿ ಫೌಂಡೇಶನ್, ರೆಡ್‌ಕ್ರಾಸ್, ಎಸ್‌ಜೆ ಶಿಕ್ಷಣ ಮಹಾ ವಿದ್ಯಾಲಯದ ಸಹಯೋಗದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದರು.

ಸಂಜೆ6 ಕ್ಕೆ ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾ ಸ್ವಾಮಿಗಳು ಹಾಗೂ ಹೊಂಬುಜ ಜೈನ ಮಠದ ಡಾ.ದೇವೇಂದ್ರ ತೀರ್ಥ ಭಟ್ಟಾರಕ ಭಟ್ಟಾಚಾರ್ಯ ಸ್ವಾಮಿ ಗಳವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಭಾವೈಕ್ಯ ಸಮ್ಮೇಳನವನ್ನು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಉದ್ಘಾಟಿಸಲಿದ್ದು, ಸಂಸದ ಬಿ,ವೈ ರಾಘವೇಂದ್ರ, ಶಾಸಕ ಬೇಳೂರು ಗೋಪಾಲಕೃಷ್ಣ, ವಿಧಾನಪರಿಷತ್ ಸದಸ್ಯರಾದ 
ಡಿ ಎಸ್ ಅರುಣ್, ಭೋಜೇಗೌಡ್ರು, ಮಾಜಿ ಶಾಸಕ ಹರತಾಳುಹಾಲಪ್ಪ ಮುಂತಾದವರು ಭಾಗವಹಿಸಲಿದ್ದಾರೆ.

ಪದ್ಮಶ್ರೀ ಪುರಸ್ಕೃತರಾದ ಜೋಗುತಿ ಮಂಜಮ್ಮ ನವರಿಗೆ ಕೆಳದಿರಾಣಿ ಚೆನ್ನಮ್ಮ ಪ್ರಶಸ್ತಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಚಲನಚಿತ್ರ ನಟ ದೊಡ್ಡಣ್ಣ ಇವರನ್ನು ಸನ್ಮಾನಿಸಲಾಗುತ್ತದೆ. ಸಾಮಾಜಿಕ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗುರುತಿಸಿ ಸಮಾಜರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ವಚನ ಸಂಗೀತ, ವಚನ ನೃತ್ಯ ರೂಪಕ ನಂತರ ಕಂಚಿನ ದೀಪ ರಥೋತ್ಸವ ಮತ್ತು ಹೂವಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.

 ಸಾರ್ವಜನಿಕರು, ಭಕ್ತಾದಿಗಳು ಆಗಮಿಸಿ , ದೀಪೋತ್ಸವದ ಎಲ್ಲಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಕೋರಿದರು. ಈ ಸಂದರ್ಭದಲ್ಲಿ ದೀಪೋತ್ಸವ ಸಮಿತಿ ಅಧ್ಯಕ್ಷ ಹರತಾಳು ನಾಗರಾಜ ಗೌಡ್ರು, ಕೋಶಾಧ್ಯಕ್ಷ ಜಿ ಎಸ್ ಚಂದ್ರಪ್ಪ, ಕಾರ್ಯದರ್ಶಿ ದೇವೇಂದ್ರಪ್ಪ ಗೌಡ್ರು, ರಾಜೇಂದ್ರ, ಕುಮಾರ್ ಗೌಡ್ರು ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಹಾಜರಿದ್ದರು.

“ ದಾಸೋಹ-ಕಾಯಕ ತತ್ವವನ್ನು ಶ್ರೀಮಠವು ಅನುಸರಿಸಿಕೊಂಡು ಬರುತ್ತಿದ್ದು ಶ್ರೀ ಮಠವು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳಲ್ಲಿ ನಡೆಸುವ ಚಟುವಟಿಕೆಗಳು ಎಲ್ಲಾ ಜಾತಿ ವರ್ಗ ಧರ್ಮದವರನ್ನು ತಲುಪುತ್ತಿದೆ. ಸ್ಥಾಯಿಯಾಗಿ ಮಠದ ಆವರಣದಲ್ಲಿರುವ ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸಾಕೇಂದ್ರದ ಮೂಲಕ ನಿರಂತರವಾಗಿ ಸಾರ್ವಜನಿಕರಿಗೆ ಸೇವೆ ಸಲ್ಲಿಸಲಾಗುತ್ತಿದೆ. ಇದಲ್ಲದೇ ಪ್ರತಿ ವರ್ಷ ದೀಪೋತ್ಸವದ ಸಮಯದಲ್ಲಿ ವಿಶೇಷ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನೂ ಸಹ ಆಯೋಜಿಸಲಾಗುತ್ತಿದೆ”
-ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು,ಮುರುಘಾಮಠ

(ವರದಿ ಚಂದ್ರಶೇಖರ ಆನಂದಪುರ)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು