ಕಬ್ಬು-ಅಡಿಕೆ-ಬಾಳೆ ತೋಟಗಳ ಮೇಲೆ ಮುಂದುವರೆದ ಆನೆಗಳ ದಾಳಿ

ವಿಜಯ ಸಂಘರ್ಷ
ಸಾಗರ: ತಾಲ್ಲೂಕಿನ ಆನoದಪುರ ಸಮೀಪದ ಆಚಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 20-25 ದಿನಗಳಿಂದಾಚೆಯಿಂದ ಕಾಡಾನೆಗಳ ಹಾವಳಿ ಹೆಚ್ಚಿದ್ದು ರೈತರು ತಮ್ಮ ತೋಟ, ಬೆಳೆಗಳ ನಷ್ಟದ ಕುರಿತಾಗಿ ಅಳಲು ತೋಡಿಕೊಳ್ಳುತ್ತಲೇ ಬಂದಿದ್ದಾರೆ.

ಇಲ್ಲಿನ ಕೆರೆಹಿತ್ಲು, ಪತ್ರೆಹೊಂಡ, ಲಕ್ಕವಳ್ಳಿ, ಗಡಿಕಲ್ಲು ಮುಂತಾದ ಗ್ರಾಮಗಳಲ್ಲಿರುವ ತೋಟಗಳ ಮೇಲೆ ಮಧ್ಯ ರಾತ್ರಿ ಸಮಯದಲ್ಲಿ ಕಾಡಾನೆಗಳು ಬಾಳೆ, ತೆಂಗು,ಅಡಿಕೆ ಮರಗಳನ್ನು ಮುರಿದು ಹಾಕುತ್ತಲಿವೆ. ಎಲೆಗಳನ್ನು ತಿಂದು ಸಸಿಗಳನ್ನು ಬುಡ ಸಮೇತ ಕಿತ್ತು ನಾಶ ಮಾಡಿರುವ ಘಟನೆ ನಡೆಯುತ್ತಲಿದೆ. ಬುಡಸಮೇತ ಒಂದೆರಡು ಗ್ರಾಮಗಳಿಂದ ಓಡಿಸಿದರೆ ಮತ್ತೊಂದೆಡೆ ಸಹಜವಾಗಿ ಹೋಗುವ ಆನೆಗಳನ್ನು ಪುನ: ಕಾಡಿನೆಡೆಗೆ ಹೋಗುವಂತೆ ಮಾಡುವ ಕೆಲಸ ಆದಷ್ಟು ಬೇಗ ಆಗಬೇಕಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಕಬ್ಬು, ಬಾಳೆ, ಮೆಕ್ಕೆ ಜೋಳ ಮುಂತಾದ ಫಸಲು ರೈತರ ಕೈ ಸೇರುವ ಹಂತದಲ್ಲಿದ್ದು ಆನೆ ಹಾವಳಿಯಿಂದ ಅಪಾರ ಬೆಳೆ ನಷ್ಟವಾಗಿದೆ. ಮಲೆನಾಡು ಭಾಗಗಳಲ್ಲಿ ಸಹಜವಾಗಿ ತೋಟಗಳ ಸಮೀಪದಲ್ಲೇ ಒಂದೊoದೇ ಮನೆಗಳಿವೆ ಅಕಸ್ಮಾತ್ ಆನೆಗಳು ಮನೆ ಮೇಲೆ ದಾಳಿ ಮಾಡಿದರೆ ನಿವಾಸಿಗಳ ಜೀವಕ್ಕೆ ಆಪತ್ತು ಎರಗುವ ಆತಂಕದಲ್ಲಿ ರೈತ ಕುಟುಂಬಗಳಿವೆ. ಈ ಕುರಿತು ಜನಪ್ರತಿ ನಿಧಿಗಳು ವಿಶೇಷ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಾತ್ರಿ ಸುಮಾರು 2 ಗಂಟೆಯ ಸಮಯದಲ್ಲಿ ದಾಳಿ ಮಾಡುತ್ತಿದ್ದು. ಸುಮಾರು 3 ಆನೆಗಳಿದ್ದು ಒಂದು ಮರಿಯಾನೆ ಇದೆಯೆಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. 
ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ರೈತರ ಮನವಿ ಮೇರೆಗೆ ಸ್ಪಂದಿಸಿ ತಮಟೆ ಹೊಡೆದು, ಪಟಾಕಿ ಸಿಡಿಸಿ ಹೊಲಗದ್ದೆ ತೋಟಗಳಿಂದ ಓಡಿಸುವ ಸಕಲ ಪ್ರಯತ್ನ ಗಳನ್ನು ಮಾಡಿದ್ದಾಗ್ಯೂ ಆನೆಗಳ ಹಾವಳಿ ಸಂಪೂರ್ಣವಾಗಿ ನಿಂತಿಲ್ಲ. ಆನೆ ದಾಳಿಗೆ ತುತ್ತಾಗಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಬೆಳೆ ನಷ್ಟದ ಪರಿಹಾರ ನಿಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

“ಆನೆ ಸೇರಿದಂತೆ ಕಾಡು ಪ್ರಾಣಿಗಳ ಮೇಲೆ ನಮಗೇನೂ ದ್ವೇಷವಾಗಲಿ ಇಲ್ಲ ಸಹಜವಾಗಿ ಕಾಡಿನ ದಾರಿಯಿಂದ ಅವು ತೋಟಗಳ ಕಡೆ ನುಗ್ಗಿವೆ ಅವುಗಳನ್ನು ಸುರಕ್ಷಿತವಾಗಿ ಪುನ: ಅರಣ್ಯ ಪ್ರದೇಶಗಳ ಕಡೆಗೆ ಕಳುಹಿಸುವ ಕೆಲಸವಾಗಬೇಕಷ್ಟೆ. ಇದಕ್ಕೆ ಅರಣ್ಯ ಇಲಾಖೆಯವರು ರೈತ ಕುಟುಂಬಗಳಿಗೆ, ಆನೆಗಳನ್ನು ತೋಟಗಳಿಂದಾಚೆಗೆ ಓಡಿಸುವಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬೆಳೆ ನಷ್ಟ ಪರಿಹಾರವನ್ನು ಒದಗಿಸುವ ಭರವಸೆಯನ್ನೂ ಸಹ ನೀಡಿದ್ದಾರೆ.”
ವಾಣೀಶ್, ರೈತರು, ಕೆರೆಹಿತ್ಲು

“ ಕಾಡಾನೆ ದಾಳಿಯಿಂದಾಗಿ ರೈತರ ಬೆಳೆ ನಷ್ಟವಾಗಿದ್ದು ಹಾನಿಗೆ ಸೂಕ್ತ ಪರಿಹಾರವನ್ನು ಸರ್ಕಾರದ ವತಿಯಿಂದ ಆದಷ್ಟು ಬೇಗ ರೈತರಿಗೆ ನೀಡಬೇಕು. ಆನೆಗಳನ್ನು ಇಲ್ಲಿಂದ ಓಡಿಸುವ ಕೆಲಸದಲ್ಲಿ ಸ್ಥಳಿಯ ಅರಣ್ಯ ಸಿಬ್ಬಂದಿಗಳ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ಇದಕ್ಕೆ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕಾದ ತುರ್ತು ಅವಶ್ಯಕತೆ ಇದೆ. ”
ಪ್ರಕಾಶ್ ತಂಗಳವಾಡಿ, ಮಾಜಿ ಅಧ್ಯಕ್ಷ ಗ್ರಾ.ಪಂ. ಆಚಾಪುರ.,

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು