ಎಂಎಸ್‍ಎಂಇ ಗಳ ಸವಲತ್ತು ಬಳಸಿಕೊಳ್ಳಬೇಕು : ಡಾ.ಕೆ.ಸಾಕ್ರಟೀಸ್

ವಿಜಯ ಸಂಘರ್ಷ
ಶಿವಮೊಗ್ಗ: ಕೃಷಿ ಬಿಟ್ಟರೆ ಅತಿ ಹೆಚ್ಚು ಉದ್ಯೋಗ ನೀಡುತ್ತಿರುವುದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯವಾಗಿದ್ದು, ಈ ವಲಯ ದಲ್ಲಿರುವ ಸವಲತ್ತುಗಳನ್ನು ಕೈಗಾರಿಕೋದ್ಯಮಿಗಳು ಬಳಕೆ ಮಾಡಿಕೊಳ್ಳ ಬೇಕೆಂದು ಎಂಎಸ್‍ಎಂಇ ಜಂಟಿ ನಿರ್ದೇಶಕ ಡಾ.ಕೆ.ಸಾಕ್ರಟೀಸ್ ಹೇಳಿದರು.

ಶನಿವಾರ ಸಿಡ್ಬಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕಾಸಿಯಾ ಇವರ ಸಂಯುಕ್ತಾಶ್ರಯದಲ್ಲಿ ಸುವರ್ಣ ಸಾಂಸ್ಕøತಿಕ ಭವನದಲ್ಲಿ ಆಯೋಜಿಸ ಲಾಗಿರುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಹಾಗೂ ಹಣಕಾಸಿನ ನೆರವು ಕುರಿತು ಅರಿವು, ರಫ್ತು ಕುರಿತು ಅರಿವು ಮೂಡಿಸುವ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.

ಇದೊಂದು ಅತ್ಯಂತ ಪ್ರಸ್ತುತವಾದ ಕಾರ್ಯಕ್ರಮವಾಗಿದೆ. ಎಂಎಸ್‍ಎಂಇ ಸುಮಾರು 11 ಕೋಟಿ ಉದ್ಯೋಗ ವನ್ನು ನೀಡಿದ್ದು, ಪರೋಕ್ಷವಾಗಿ 6 ಕೋಟಿ ಜನರಿಗೆ ಉದ್ಯೋಗ ನೀಡಿದೆ. ಜಿಡಿಪಿ ಗೆ ಶೇ.27 ರಷ್ಟು ತನ್ನ ಕೊಡುಗೆ ಯನ್ನಿತ್ತಿದ್ದು ಶೇ.25 ರಫ್ತು ಇದರಿಂದ ಆಗುತ್ತಿದೆ.

ನಮ್ಮ ರಾಜ್ಯದಲ್ಲಿ ಎಂಎಸ್‍ಎಂಇ ಗೆ ಅಗತ್ಯವಾದ ಸಂಪನ್ಮೂಲ ಮತ್ತು ಪೂರಕ ವಾತಾವರಣವಿದ್ದು ಉದ್ಯಮ ಶೀಲ ಸಂಸ್ಕøತಿಯೂ ಇದೆ. ಜೊತೆಗೆ ಎಂಎಸ್‍ಎಂಇ ಬೆಳೆಯುತ್ತಿದ್ದರೂ ಕೈಗಾರಿಕೆಗಳನ್ನು ನಡೆಸಲು ಹಲವು ಸಮಸ್ಯೆಗಳು ಇವೆ. ಮುಖ್ಯವಾಗಿ ಮಾರುಕಟ್ಟೆ ಮತ್ತು ಹಣಕಾಸು ಸಮಸ್ಯೆ ಇದ್ದು, ಇಂತಹ ಕಾರ್ಯಕ್ರಮದಲ್ಲಿ ಈ ಬಗ್ಗೆ ಹೆಚ್ಚಿನ ಚರ್ಚೆ ಆಗಬೇಕು. ಹಾಗೂ ಸರ್ಕಾರ ಸಹ ಇವುಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ದಿಗಾಗಿ ಎಂಎಸ್‍ಎಂಇ ಸಚಿವಾಲಯ ಹಲವಾರು ಯೋಜನೆ ಗಳನ್ನು ಹಾಕಿಕೊಂಡಿದ್ದು ಇದನ್ನು ಎಂಎಸ್‍ಎಂಇ ಗಳು ಬಳಸಿಕೊಳ್ಳಬೇಕೆಂದರು.

ಕಾಸಿಯಾ ಅಧ್ಯಕ್ಷ ಸಿ.ಎ.ಶಶಿಧರ ಶೆಟ್ಟಿ ಮಾತನಾಡಿ, ರಾಜ್ಯದ ಕೈಗಾರಿಕೆಗಳಿಗೆ ಅತ್ಯಂತ ಹಳೆಯ ಇತಿಹಾಸವಿದ್ದು, ಮೊದಲಿಗೆ ಹೆಚ್‍ಎಂಟಿ, ಬಿಎಂಎಲ್ ಅಂತಹ ಪಬ್ಲಿಕ್ ಸೆಕ್ಟರ್ ಮೇಲೆ ಅವಲಂಬಿತವಾಗಿದ್ದವು. ಅವು ಕ್ಷೀಣಿಸುತ್ತಾ ಬಂದ ಹಾಗೆ ಸ್ವಾವಲಂಬಿ- ವೈವಿಧ್ಯ ಕೈಗಾರಿಕೆಗೆ ಒತ್ತು ಕೊಡಲಾರಂಭಿಸಿದವು. 

ರಾಜ್ಯದ ಕೈಗಾರಿಕೆಗಳು ತಾಂತ್ರಿಕವಾಗಿ ಸುಸಜ್ಜಿತವಾಗಿದ್ದು ಜಗತ್ತಿಗೆ ಸ್ಪರ್ಧಾತ್ಮ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ. ಶಿವಮೊಗ್ಗದ ಫೌಂಡ್ರಿಗಳಿಂದಲೇ ಬೋಯಿಂಗ್, ಏರ್‍ಬಸ್ ಗೆ ರಫ್ತು ಆಗುತ್ತಿದೆ. ಆದರೆ ರಾಜ್ಯದ ಶೇ.94 ಕೈಗಾರಿಕೆಗಳು ಖಾಸಗಿ ಕೈಗಾರಿಕಾ ವಸಾಹತುವಿನಲ್ಲಿದ್ದು, ಸರ್ಕಾರದ ಕೆಐಎಡಿಬಿ, ಕೆಎಸ್‍ಎಸ್‍ಐಡಿಸಿ ಗಳಿಂದ ಕೈಗಾರಿಕಾ ಪ್ರದೇಶ ಅಭಿವೃದ್ದಿ ಕೆಲಸ ಆಗುತ್ತಿದೆ.

ಎಂಎಸ್‍ಎಂಇ ಸಚಿವಾಲಯವು ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು, ಸವಲತ್ತುಗಳನ್ನು ಜಾರಿಗೆ ತಂದಿದೆ. ಆದರೆ ಜನರಿಗೆ ಅದರ ಅರಿವು ಕಡಿಮೆ ಇದೆ ಕಾರಣ ಸಣ್ಣ ಕೈಗಾರಿಕೆಗಳ ಪಾಲ್ಗೊಳ್ಳುವಿಕೆ ಇಲ್ಲದಿರುವುದಾಗಿದೆ. ಇತ್ತೀಚೆಗೆ ಸರ್ಕಾರ ಎಂಎಸ್‍ಇ-ಎಸ್‍ಪಿಐಸಿಇ, ಎಂಎಸ್‍ಇ-ಜಿಐಎಫ್‍ಟಿ, ಎಂಎಸ್‍ಇ- ಓಡಿಆರ್ ಎಂಬ ಹೊಸ ಯೋಜನೆಗಳನ್ನು ಜಾರಿ ಮಾಡಿದೆ ಹಾಗೂ ಜೆಮ್ , ಟ್ರೇಡ್ಸ್ ಪೋರ್ಟಲ್‍ಗಳಿದ್ದು ಇಲ್ಲಿ ಕೈಗಾರಿಕೆಗಳು ಪಾಲ್ಗೊಂಡು ವ್ಯಾಪಾರ ಇತರೆ ಚಟುವಟಿಕೆ ಗಳನ್ನು ಕೈಗೊಳ್ಳಬಹುದು ಎಂದ ಅವರು ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಖಾಸಗಿ ಸಂಸ್ಥೆಗಳಲ್ಲಿ ಅಟಲ್ ಇನಕ್ಯುಬೇಷನ್ ಸೆಂಟರ್ ಇದ್ದು ಯುವಜನತೆ ಇದನ್ನು ಬಳಕೆ ಮಾಡಿಕೊಂಡು ಸ್ಟಾರ್ಟ್‍ಅಪ್ ಆರಂಭಿಸಬಹುದು ಎಂದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಎನ್ ಗೋಪಿನಾಥ್ ಮಾತನಾಡಿ, ಕೈಗಾರಿಕೆಗಳ ಉತ್ತೇಜನಕ್ಕೆ ಸಂಬಂಧಿಸಿದ ಯೋಜನೆಗಳನ್ನು ಅರ್ಹರಿಗೆ ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶ, ವಿದ್ಯಾರ್ಥಿ ಗಳಿಗೆ ಉದ್ಯಮಶೀಲತೆ ಬಗ್ಗೆ ಅನ್ವಯಿಕ ಪಾಠಗಳು ಆಗಬೇಕು. ಮುಂದಿನ ದಿನಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನೂ ಒಳಗೊಂಡು ಇಂತಹ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡುವ ಯೋಚನೆ ಇದೆ.

ಉದ್ಯಮ ನಡೆಸಲು ಹಲವಾರು ತೊಂದರೆ ಗಳಿದ್ದರೂ ಸರ್ಕಾರ ಹಲವಾರು ಯೋಜನೆಗಳ ಮೂಲಕ ಸ್ಪಂದಿಸುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಯಿಂದಾಗಿ ಒಳ್ಳೆಯ ವೇದಿಕೆ ಒದಗುತ್ತಿದ್ದು ವಿದ್ಯಾರ್ಥಿಗಳು, ಯುವಜನತೆ ಉದ್ಯಮಶೀಲರಾಗಬೇಕೆಂದು ತಿಳಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್ ಆರ್, ವಿಟಿಸಿಸಿ ಜಂಟಿ ನಿರ್ದೇಶಕ ಸಿ.ಎಸ್.ಬಾಬು ನಾಗೇಶ್, ಕಾಸಿಯಾ ಜಂಟಿ ಕಾರ್ಯದರ್ಶಿ-ಗ್ರಾಮೀನ ಅರುಣ್ ಪಡಿಯಾರ್ ಎನ್, ಖಜಾಂಚಿ ಮಲ್ಲೇಶಗೌಡ, ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ರಮೇಶ್ ಹೆಗಡೆ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹಕಾರ್ಯದರ್ಶಿ ಜಿ ವಿಜಯಕುಮಾರ್ ಇತರೆ ಉದ್ಯಮಿಗಳು ಹಾಜರಿದ್ದರು. ಕಾಸಿಯಾ ಉಪಾಧ್ಯಕ್ಷ ರಾಜಗೋಪಾಲ್ ಕಾರ್ಯಕ್ರಮ ನಿರ್ವಹಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು